ಬ್ಲ್ಯಾಕ್​​ ​ಬಾಕ್ಸ್ ಡೇಟಾ ಡೌನ್​ಲೋಡ್

7-685d8b00bd2f4
Published on

ನವದೆಹಲಿ: ಗುಜರಾತ್​ನ ಅಹಮದಾಬಾದ್​ನಲ್ಲಿ ಜೂನ್ 12ರಂದು ಭೀಕರ ದುರಂತಕ್ಕೀಡಾದ ಏರ್ ಇಂಡಿಯಾದ ಡ್ರೀಮ್​​ಲೈ ನರ್ ವಿಮಾನದ ಎರಡೂ ಬ್ಲ್ಯಾಕ್ ಬಾಕ್ಸ್ ಗಳಿಂದ ಮಾಹಿತಿಗಳನ್ನು ಯಶಸ್ವಿಯಾಗಿ ಡೌನ್​ಲೋಡ್ ಮಾಡಲಾಗಿದ್ದು ವಿಶ್ಲೇಷಿಸಲಾಗುತ್ತಿದೆ ಎಂದು ಸರ್ಕಾರ ಗುರುವಾರ ತಿಳಿಸಿದೆ.

ಫ್ಲೈಟ್ ಡೇಟಾ ರೆಕಾರ್ಡರ್ (ಎಫ್​ಡಿಆರ್) ಮತ್ತು ಕಾಕ್​ಪಿಟ್ ವಾಯ್ಸ್​ ರೆಕಾರ್ಡರ್ (ಸಿವಿಆರ್) ಎಂಬ ಈ ಎರಡು ಬ್ಲಾ್ಯಕ್ ಬಾಕ್ಸ್​ಗಳು ಅವಘಡದಲ್ಲಿ ತೀವ್ರ ಜಖಂಗೊಂಡಿದ್ದು ಬಳಸಬಹುದಾದ ದತ್ತಾಂಶಗಳನ್ನು ಅದರಿಂದ ತೆಗೆಯಬಹುದೇ ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಿತ್ತು. ಡೇಟಾದ ಫೊರೆನ್ಸಿಕ್ ತನಿಖೆಗಾಗಿ ಅವೆರಡನ್ನೂ ಅಮೆರಿಕಕ್ಕೆ ಕಳಿಸುವ ಸಾಧ್ಯತೆಯಿದೆ ಎಂಬ ವರದಿ ಹರಿದಾಡುತ್ತಿದ್ದು ಅದು ಕೇವಲ ಊಹಾಪೋಹ ಎಂದು ಸರ್ಕಾರ ಹೇಳಿತ್ತು. ಭಾರತದಲ್ಲೇ ಪರೀಕ್ಷೆ ನಡೆಸಲಾಗುವುದೆಂದು ಸ್ಪಷ್ಟಪಡಿಸಿತ್ತು. ಇಂಥ ಅನುಮಾನಗಳ ನಡುವೆ, ಕ್ರ್ಯಾಶ್ ಪೊ›ಟೆಕ್ಷನ್ ಮಾಡ್ಯುಲ್ (ಸಿಪಿಎಂ) ಮತ್ತು ಮೆಮೊರಿ ಮಾಡ್ಯುಲ್ ಸುರಕ್ಷಿತವಾಗಿ ಹೊರತೆಗೆದು ದತ್ತಾಂಶ ಗಳನ್ನು ಡೌನ್​ಲೋಡ್ ಮಾಡುವಲ್ಲಿ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಯಶಸ್ವಿಯಾಗಿದೆ.

ಬಾಕ್ಸ್​ಗಳ ಪೈಕಿ ಒಂದು ವಿಮಾನ ಪತನಗೊಂಡ ಹಾಸ್ಟೆಲ್​ನ ಛಾವಣಿ ಮೇಲೆ ಹಾಗೂ ಇನ್ನೊಂದು ಅವಶೇಷಗಳ ನಡುವೆ ಪತ್ತೆಯಾಗಿದ್ದವು. ಅವುಗಳನ್ನು ನವದೆಹಲಿಯಲ್ಲಿರುವ ಎಎಐಬಿ ಪ್ರಯೋಗಾಲಯಕ್ಕೆ ಮಂಗಳವಾರ ಸುರಕ್ಷಿತವಾಗಿ ಸಾಗಿಸಲಾಗಿತ್ತು. ಅದೇ ದಿನ ದತ್ತಾಂಶ ಹೊರತೆಗೆಯುವ ಕೆಲಸ ಆರಂಭಿಸಿದ್ದು ಬುಧವಾರ ಪ್ರಕ್ರಿಯೆ ಪೂರ್ಣಗೊಂಡಿದೆ.

ಕ್ಯಾಪ್ಟನ್ ಕರೆ: ಪತನಗೊಂಡ ವಿಮಾನದ ಕ್ಯಾಪ್ಟನ್ ಸಭರ್​ವಾಲ್ ಕೊನೆಯ ಕ್ಷಣದಲ್ಲಿ ‘ಮೇ ಡೇ, ಮೇ ಡೇ...’ ಎಂದು ಅಹಮದಾಬಾದ್ ಎಟಿಸಿಗೆ ಕಳಿಸಿದ ಅಸಹಾಯಕತೆಯ ಸಂದೇಶದಲ್ಲಿ ಹೇಳಿದ್ದರು ಎನ್ನಲಾಗಿದೆ.

‘ನೋ ಪವರ್...ನೋ ಥ್ರಸ್ಟ್...’ ಎಂದು ಕೂಡ ಅವರು ಹೇಳಿದ್ದರೇ ಎನ್ನುವುದು ವಿಶ್ಲೇಷಣೆಯಿಂದ ಗೊತ್ತಾಗಲಿದೆ. ಮಧ್ಯಾಹ್ನ 1.39ಕ್ಕೆ ಟೇಕಾಫ್ ಆದ ವಿಮಾನ, 36 ಸೆಕೆಂಡ್​ಗಳ ನಂತರ ದುರಂತಕ್ಕೊಳಗಾಗಿತ್ತು. ಕ್ಯಾಪ್ಟನ್ ಸಭರ್​ವಾಲ್ ಮೇ ಡೇ ಸಂದೇಶ ಕಳಿಸಿದ ಮಿಲಿಸೆಕೆಂಡ್​ನಷ್ಟು ನಿಖರ ಸಮಯವು ಸಿವಿಆರ್ ಡೇಟಾ ವಿಶ್ಲೇಷಣೆಯಿಂದ ತಿಳಿಯಲಿದೆ. ವಿಮಾನವನ್ನು ಉಳಿಸಲು ಫಸ್ಟ್ ಆಫೀಸರ್ ಕ್ಲೈವ್ ಕುಂದರ್​ಗೆ ಎಷ್ಟು ಸಮಯವಿತ್ತು ಎಂಬುದನ್ನೂ ಅದು ತಿಳಿಸಲಿದೆ.

ಕುಟುಂಬಸ್ಥರೊಂದಿಗೆ ಸಂಪರ್ಕ

ಈ ನಡುವೆ, ಟಾಟಾ ಸನ್ಸ್ ಚೇರ್ಮನ್ ಎನ್. ಚಂದ್ರಶೇಖರನ್ ಮತ್ತು ಏರ್ ಇಂಡಿಯಾ ಸಿಇಒ ಹಾಗೂ ಎಂಡಿ ಕ್ಯಾಂಪ್​ಬೆಲ್ ವಿಲ್ಸನ್ ದುರಂತ ಸಂತ್ರಸ್ತರ ಕುಟುಂಬದವರೊಡನೆ ಸಂಪರ್ಕದಲ್ಲಿದ್ದಾರೆ ಎಂದು ವಿಮಾನಯಾನ ಸಂಸ್ಥೆಯ ಮೂಲಗಳು ಗುರುವಾರ ಹೇಳಿವೆ. ಸಂತ್ರಸ್ತ ಕುಟುಂಬಗಳನ್ನು ‘ಟಾಟಾ ಕುಟುಂಬಸ್ಥರು’ ಎಂದೇ ಸಂಬೋಧಿಸಿರುವ ಚಂದ್ರಶೇಖರನ್, ಘೊಷಿಸಿದ ಪರಿಹಾರಕ್ಕಿಂತಲೂ ಅಧಿಕ ನೆರವನ್ನು ಒದಗಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net