ಬಿಬಿಎಂಪಿ ವಿಭಜನೆ ವಿರುದ್ಧ ಬಿಜೆಪಿ ಮೂರು ಹಂತದ ಹೋರಾಟ

bjp mla b.y.vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
Published on

ಬೆಂಗಳೂರು: ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಬಿಬಿಎಂಪಿಯನ್ನು ಐದು ಪಾಲಿಕೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ವಿಧಾನಮಂಡಲ ಅಧಿವೇಶನದ ಒಳಗೂ ಮತ್ತು ಹೊರಗೂ ಹೋರಾಟ ನಡೆಸಲು ತೀರ್ಮಾನಿಸಿದೆ.

ಮಲ್ಲೇಶ್ವರದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಶನಿವಾರ ಬಿಜೆಪಿ ರಾಜಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಶಾಸಕರ ಸಭೆ ನಡೆಸಿ ಸರ್ಕಾರದ ವಿರುದ್ಧ ಹೋರಾಟ ನಡೆಸುವ ನಿರ್ಧಾರಕ್ಕೆ ಬರಲಾಗಿದೆ.

ಈಗಾಗಲೇ 5 ಪಾಲಿಕೆಗಳಾಗಿ ವಿಭಾಗ ಮಾಡಿರುವ ಸರ್ಕಾರ ಬರುವ ವಿಧಾನಸಭೆ ಅಧಿವೇಶನದಲ್ಲಿ ವಿಧೇಯಕವನ್ನು ಮಂಡನೆ ಮಾಡಿದಾಗ ಪ್ರತಿರೋಧ ವ್ಯಕ್ತಪಡಿಸುವುದು. ಐದು ಪಾಲಿಕೆ ಬದಲಿಗೆ ಅಧಿಕಾರ ವಿಕೇಂದ್ರೀಕರಣ ಮಾಡಿ ಐವರು ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಎಲ್ಲದಕ್ಕೂ ಒಬ್ಬರೇ ಮೇಯರ್ ಇರಲಿ ಎಂದು ಸರ್ಕಾರಕ್ಕೆ ಒತ್ತಡ ತರುವುದು.

ಒಂದುವೇಳೆ ಬಹುಮತ ಇರುವುದಾಗಿ ವಿಧೇಯಕ ಅಂಗೀಕರಿಸಿದರೆ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡುವುದು. ಜತೆ ಜತೆಗೆ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಶುರು ಮಾಡುವುದು ಮತ್ತು ಐದು ಪಾಲಿಕೆಯಾಗಿ ವಿಭಜನೆ ಮಾಡುವುದರಿಂದ ಆಗುವ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬಹುದು. ಈಗಾಗಲೇ ದೇಶದಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ಪಾಲಿಕೆಗಳನ್ನು ವಿಭಾಗ ಮಾಡಿ ಮತ್ತೆ ವಾಪಸ್ ತೆಗೆದುಕೊಂಡಿರುವ ಬಗ್ಗೆ ಅರಿವು ಮೂಡಿಸಬೇಕು. ಬಿಬಿಎಂಪಿಯನ್ನು ಹೋಳು ಮಾಡುವುದರಿಂದ ಆಗುವ ಸಮಸ್ಯೆಗಳನ್ನು ಜನರಿಗೆ ಮನವಿ ಮಾಡಲು ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ.

ಸಭೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ತನಗೆ ಬೇಕಾದಂತೆ ಬೆಂಗಳೂರನ್ನು ವಿಭಜನೆ ಮಾಡಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ. ಬೆಂಗಳೂರನ್ನು ವಿಭಜನೆ ಮಾಡಿ ಎಂದು ಜನರು ಕೇಳಿಲ್ಲ. ಈಗಾಗಲೇ ತೆರಿಗೆ, ಸೆಸ್, ಇ-ಖಾತಾದಿಂದ ಸಮಸ್ಯೆ ಸೃಷ್ಟಿಸಿದ್ದಾರೆ. ಈ ಸಮಯದಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತವಾಗಿದೆ. ಅದನ್ನು ತಪ್ಪಿಸಲು ಹೀಗೆ ಭಾಗ ಮಾಡಿದ್ದಾರೆ ಎಂದು ಆರೋಪ ಮಾಡಿದರು.

ಆತುರಾತುರವಾಗಿ ಟೆಂಡರ್

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಗರದ ಅಭಿವೃದ್ಧಿ ವಿಚಾರದಲ್ಲಿ ವೈಜ್ಞಾನಿಕವಾಗಿ ಯೋಜನೆ ಮಾಡುತ್ತಿಲ್ಲ. ಭೂಗತ ಟನೆಲ್ ರಸ್ತೆ, ಬಿಬಿಎಂಪಿಯನ್ನು 5 ವಿಭಾಗವಾಗಿ ಮಾಡುವುದು ಅವೈಜ್ಞಾನಿಕವಾಗಿದೆ ಎಂದು ವಿಜಯೇಂದ್ರ ಟೀಕಿಸಿದರು. ಐದು ಪಾಲಿಕೆ ಮಾಡುವುದು ಅಭಿವೃದ್ಧಿಗೆ ಪೂರಕವಲ್ಲ. ಮುಂಬೈ ಮತ್ತಿತರ ಮಹಾನಗರಗಳಲ್ಲಿ ಇಂಥ ಪ್ರಯೋಗ ಮಾಡಿ ಅವೆಲ್ಲವೂ ವಿಫಲವಾಗಿವೆ. ಟನಲ್ ರಸ್ತೆ ಸಾಧಕ ಬಾಧಕವನ್ನು ಚರ್ಚೆ ಮಾಡದೆ ಕಪ್ಪುಪಟ್ಟಿಯಲ್ಲಿ ಇರುವ ಕಂಪನಿಗಳನ್ನು ಸೇರಿಸಿಕೊಂಡು ಆತುರಾತುರವಾಗಿ ಟೆಂಡರ್ ಕರೆಯಲು ಹೊರಡಿದ್ದಾರೆ. ಸಾವಿರಾರು ಮನೆಗಳಿಗೆ ಒಸಿ ಮತ್ತು ಸಿಸಿ ಸಿಗದೆ ಗೃಹ ಪ್ರವೇಶವೂ ಮಾಡಿಲ್ಲ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿಲ್ಲ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಏಕೆ?

1. ಬಿಬಿಎಂಪಿ ವಿಭಜನೆಯಿಂದ ಸಮಸ್ಯೆಗೆ ಪರಿಹಾರ ಸಿಗಲ್ಲ

2. ಇರುವ ವ್ಯವಸ್ಥೆಯನ್ನು ಪ್ರತ್ಯೇಕಿಸಿದರೆ ಮತ್ತಷ್ಟು ಗೊಂದಲ

3. ಈ ಪ್ರಯೋಗ ಬೇರೆ ನಗರಗಳಲ್ಲಿ ನಡೆದು ವಿಲವಾಗಿದೆ

4. ಆಡಳಿತ ವೆಚ್ಚ ಮತ್ತಷ್ಟು ಹೆಚ್ಚಳ ಹೊರತು ಉಪಯೋಗವಿಲ್ಲ

5. ರಾಜಕೀಯ ಕಾರಣ ಹೊರತು ಬೇರೇನೂ ಉದ್ದೇಶವಿಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net