

ಬೆಂಗಳೂರು: ಬಿಜೆಪಿ ಈ ದೇಶಕ್ಕೆ ಕೊಟ್ಟ ಕೊಡುಗೆ ಏನು? ಅಂದು ಬ್ರಿಟೀಷರ ಪರವಾಗಿ ನಿಂತು ಷಡ್ಯಂತ್ರ ರೂಪಿಸಿದ ಶಕುನಿಗಳು, ಗೋಮುಖ ವ್ಯಾಘ್ರಗಳಿಂದ ದೇಶವನ್ನು ರಕ್ಷಿಸಬೇಕು.ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರ ಜತೆ ಕೈಜೋಡಿಸಿದ್ದ ದೇಶದ್ರೋಹಿಗಳು ಇಂದು ಅಧಿಕಾರ ಸಿಕ್ಕ ತಕ್ಷಣ ನಮಗೆ ದೇಶ ಭಕ್ತಿಯ ಪಾಠ ಮಾಡುತ್ತಿರುವುದು ದುರಂತ ಎಂದರು.
ಸ್ವಾತಂತ್ರ ಹೋರಾಟದಲ್ಲಿ ಸುಮಾರು 6.5 ಲಕ್ಷ ಕಾಂಗ್ರೆಸ್ಸಿಗರು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ನಮ್ಮ ಕಾಂಗ್ರೆಸ್ ಎಂಬುದು ನಮ್ಮ ಹೆಗ್ಗಳಿಕೆ. ಕಾರ್ಯಕರ್ತರು, ಮುಖಂಡರುಗಳು ಧೈರ್ಯದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಎಂದು ಹೊಸ ಜನಾಂಗಕ್ಕೆ ತಿಳಿಸಬೇಕು ಎಂದು ಕರೆ ನೀಡಿದರು.
ಶಾಮಪ್ರಸಾದ ಮುಖರ್ಜಿ ಅವರು ಕ್ವಿಟ್ ಇಂಡಿಯಾ ಚಳುವಳಿ ಹತ್ತಿಕ್ಕಬೇಕು ಎಂದು ಬ್ರಿಟಿಷರಿಗೆ ಪತ್ರ ಬರೆದಿದ್ದರು. ಇವರ ಹಿಂಬಾಲಕರು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಕೇಳುತ್ತಾರೆ. ನಮ್ಮೆಲ್ಲರ ಹಿಂಜರಿಕೆಯಿಂದ ಮಹಾತ್ಮಾ ಗಾಂಧೀಜಿ, ನೆಹರು, ಇಂದಿರಾಗಾಂಧಿ, ಸರ್ದಾರ್ ಪಟೇಲ್ ಸೇರಿದಂತೆ ಅನೇಕ ನಾಯಕರುಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಯೇ ಇಲ್ಲ ಎಂದು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾವಿರಾರು ಜನ ತಮ್ಮ ಮನೆ, ಮಠ, ಜೀವನವನ್ನೇ ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ತನು, ಮನ, ಧನ, ಪ್ರಾಣ ಎಲ್ಲವನ್ನು ಅರ್ಪಿಸಿದವರು ಕಾಂಗ್ರೆಸ್‌ನವರು. ಅಂದು ಬ್ರಿಟೀಷರ ಗುಲಾಮರಾಗಿದ್ದವರು ಇಂದು ನಕಲಿ ದೇಶಭಕ್ತಿಯ ಮುಖವಾಡ ಧರಿಸಿ ದೇಶವನ್ನು ನಾಶ ಮಾಡುತ್ತಿದ್ದಾರೆ ಎಂದು ಟೀಕಿಸಿದರಲ್ಲದೇ, ಬಿಜೆಪಿ ಸರ್ಕಾರ ಖಾಸಗಿಯವರಿಗೆ ಮಾರುತ್ತಿರುವ ಸಾರ್ವಜನಿಕ ವಲಯ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದೇ ಕಾಂಗ್ರೆಸ್ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ವಿಜಯ್ ಮುಳುಗುಂದ್, ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಮಂಜುನಾಥ ಭಂಡಾರಿ, ಪ್ರಕಾಶ್ ರಾಥೋಡ್ ಮೊದಲಾದವರಿದ್ದರು.