

ಬೆಂಗಳೂರು: ಬೆಲೆಗಳ ಏರಿಕೆ, ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲು, ಎಸ್‌ಸಿಪಿ, ಟಿಎಸ್‌ಪಿ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ವಿರೋಧಿಸಿ ರಾಜ್ಯ ಸರ್ಕಾರದ ಪ್ರತಿಪಕ್ಷ ಬಿಜೆಪಿ ತೊಡೆತಟ್ಟಿ, ಮತ್ತೊಂದು ಸುತ್ತಿನ ದೀರ್ಘಾವಧಿ ಹೋರಾಟಕ್ಕೆ ಭೂಮಿಕೆ ಸಿದ್ಧಪಡಿಸಿದೆ.
ಮೈಸೂರಿನಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಸೋಮವಾರ ಪೂಜೆ ಸಲ್ಲಿಸಲಿದೆ. ಇದೇ ವೇಳೆ ‘ಜನಾಕ್ರೋಶ ಯಾತ್ರೆ’ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಲಿದ್ದಾರೆ. ಮೇ 3ರವರೆಗೆ ನಾಲ್ಕು ಹಂತಗಳಲ್ಲಿ ಒಟ್ಟು 16 ದಿನಗಳ ಕಾಲ ಯಾತ್ರೆ ನಡೆಯಲಿದೆ.
ಮೂರು ಪ್ರಮುಖ ನಿರ್ಧಾರಗಳನ್ನು ಹಿಂಪಡೆಯಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಿರುವ ಕೇಸರಿ ಪಡೆ, ಜನಪರವಾದ ಧ್ವನಿಯಿದು ಎಂದು ಸಾಬೀತುಪಡಿಸಲು ಮುಂದಾಗಿದೆ.
ಮೊದಲ ಹಂತದಲ್ಲಿ ಆಹೋರಾತ್ರಿ ಧರಣಿ ಹೂಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಂದೋಲನದ ಕಹಳೆ ಮೊಳಗಿಸಿ ಎಚ್ಚರಿಸಿತ್ತು. ಸಿಎಂ, ಡಿಸಿಎಂ ಸೇರಿ ಹಲವು ಸಚಿವರು ನೀತಿ-ನಿರ್ಧಾರಗಳ ಮರು ಪರಿಶೀಲನೆ ಬದಲು ಸಮರ್ಥಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜನಾಕ್ರೋಶದ ಬಿಸಿ ಮುಟ್ಟಿಸಲು ಕಮಲಪಡೆ ಮುನ್ನುಗ್ಗಿದೆ. ಆ ಮೂಲಕ ಜನರಲ್ಲಿ ಮಡುಗಟ್ಟಿದ ಬೇಸರಕ್ಕೆ ಅಭಿಪ್ರಾಯ ಮೂಡಿಸಿ, ಮುಂಬರುವ ಗ್ರಾಮೀಣ-ನಗರ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆಗೆ ‘ಆಡಳಿತ ವಿರೋಧಿ ಅಲೆ’ಯ ಉಬ್ಬರ ಹೆಚ್ಚಿಸಲು ಹವಣಿಸಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಜಂಟಿಯಾಗಿ ಜನಾಕ್ರೋಶ ಯಾತ್ರೆ ಲಾಂಛನ ಬಿಡುಗಡೆ ಮಾಡಿದರು.
ಆರ್.ಅಶೋಕ್ ಮಾತನಾಡಿ ಬೆಲೆಗಳ ಏರಿಕೆಯಿಂದ ಜನರ ಬದುಕು ದುಸ್ತರವಾಗಿದೆ. ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳಿಗೊಂದು ಬೆಲೆ ಏರಿಕೆ ಗ್‌ಟಿ ಜನರಿಗೆ ನೀಡಬೇಕು ಎಂದು ಬಯಸಿದಂತಿದೆ ಎಂದು ಕಿಡಿಕಾರಿದರು.
ಪೆಟ್ರೋಲ್, ಡೀಸೆಲ್ ಸೇರಿ 15ಕ್ಕೂ ಹೆಚ್ಚು ದರಗಳು ಏರಿಕೆಯಾಗಿವೆ. ಈಗ ಕಸದಿಂದಲೂ ದುಡ್ಡು ಹೊಡೆಯಲಾಗುತ್ತಿದೆ. ಖಾಲಿ ನಿವೇಶನದಲ್ಲಿ ಕಸ ಬೀಳುತ್ತದೆಯೋ ಇಲ್ಲವೋ ಗೊತ್ತಿಲ್ಲ, ಬಿಬಿಎಂಪಿ ಸೆಸ್ ಬೀಳಲಿದ್ದು, ಇದರಿಂದಲೇ ಒಂದೂವರೆ ಕೋಟಿ ರೂ. ಲೂಟಿ ಮಾಡುವರು ಎಂದು ಆಪಾದಿಸಿದರು.