ಕಾಂಗ್ರೆಸ್ ನ ಬೆದರಿಕೆ ತಂತ್ರಗಳಿಗೆ ಬಿಜೆಪಿ ಕಾರ್ಯಕರ್ತರು ಅಂಜುವುದಿಲ್ಲ: ಬಿ.ವೈ.ವಿಜಯೇಂದ್ರ ಸೆಡ್ಡು

IMG-20240729-WA0018
Published on

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹಂಚಿಕೆ ಹಗರಣದ ವಿರುದ್ಧ ಹೋರಾಟಕ್ಕೆ ಇಳಿದಿದ್ದೇವೆ. ಬಿಜೆಪಿ ಆಡಳಿತಾವಧಿಯಲ್ಲಿ 21 ಹಗರಣಗಳು ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಈ ರೀತಿ ಗೊಡ್ಡು ಬೆದರಿಕೆಗಳಿಗೆ ನಮ್ಮ ಕಾರ್ಯಕರ್ತರು ಅಂಜುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸೆಡ್ಡು ಹೊಡೆದರು.

ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಏರ್ಪಡಿಸಿರುವ ಮೈಸೂರು ಪಾದಯಾತ್ರೆ ಪೂರ್ವ ತಯಾರಿ ಸಭೆಯನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ಶೋಷಿತ ಸಮುದಾಯಗಳಿಗೆ ವಂಚನೆ, ಬಡವರ ನಿವೇಶನಗಳ ಹಕ್ಕು ಕಸಿದುಕೊಂಡಾಗ ಧ್ವನಿ ಎತ್ತಿ, ಹೋರಾಟ ಮಾಡದಿದ್ದರೆ ಭಗವಂತನೂ ಮೆಚ್ಚುವುದಿಲ್ಲ ಎಂದರು.

ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿಎಂ  ಅದೇ ಅಹಿಂದ ಸಮುದಾಯಕ್ಕೆ ವಂಚನೆ ಮಾಡುತ್ತಿದ್ದಾರೆ. ಹೀಗಾಗಿ ನಾವು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಾನೂನು ಬಾಹಿರವಾಗಿ ಸಿದ್ದರಾಮಯ್ಯ ಪತ್ನಿಗೆ ಹಂಚಿಕೆಯಾದ 14 ನಿವೇಶನಗಳು ವಾಪಸ್ ಬಡವರ ಪಾಲಾಗಲಿವೆ. ಎಳ್ಳಷ್ಟು ಅನುಮಾನ ಬೇಡವೆಂದು ನೆರೆದವರಿಗೆ ಹುರಿದುಂಬಿಸಿದರು.

ಅನ್ಯಾಯದ ವಿರುದ್ಧ ಚಳವಳಿ

ವಿಧಾನಸಭೆ ಚುನಾವಣೆ ಹತ್ತಿರ ಬಂದಾಗ ಶೇ.40 ಪರ್ಸೆಂಟ್ ಭ್ರಷ್ಟಾಚಾರದ ಆರೋಪ ಹೊರಿಸಿ ನಮ್ಮ ವಿರುದ್ಧ ಕಾಂಗ್ರೆಸ್ ನವರು ಹೋರಾಟ ಮಾಡಿದರು. ಆಧಾರರಹಿತ ಆರೋಪ ಮಾಡಿ ಅಧಿಕಾರಕ್ಕೆ ಬಂದರು.

ಈಗ ಯಾವುದೇ ಚುನಾವಣೆಗಳಿಲ್ಲ. ಬಡವರು, ಪರಿಶಿಷ್ಟ ಜಾತಿ,‌ ಪಂಗಡ, ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಿದರ. ಹಾಗಾಗಿ ಚಳವಳಿ ನಡೆಸುತ್ತಿದ್ದೇವೆ. ವಾಲ್ಮೀಕಿ ನಿಗಮದಲ್ಲಿ ಹಗರಣವಾಗಿಲ್ಲ ಎಂದಿದ್ದ ಸಿಎಂ, ನಂತರ ಸಚಿವ ಸ್ಥಾನಕ್ಕರ ನಾಗೇಂದ್ರ ನೀಡಿದ ರಾಜೀನಾಮೆ ಪಡೆದುಕೊಂಡಿದ್ದಾರೆ.

ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಚರ್ಚಿಸಿದ ಸರ್ಕಾರ, ಮುಡಾ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶವೇ ಕೊಡಲಿಲ್ಲ. ಹಳೆಯ ಹಗರಣವೆಂದು ಹೇಳಿದರು. ಚರ್ಚೆಯಾದರೆ ಇವರ ಹಣೆಬರಹ ಬಹಿರಂಗವಾಗಲಿದೆ ಎಂದು ತಾಂತ್ರಿಕ ಕಾರಣ ಒಡ್ಡಿ ಸಭಾಧ್ಯಕ್ಷರ ಮೇಲೆ ಒತ್ತಡ ತಂದು ಚರ್ಚೆಗೆ ಅವಕಾಶ ಕೊಡಲಿಲ್ಲ.

ಚರ್ಚೆಗೆ ಅವಕಾಶ ಕೊಡಲಿಲ್ಲ

ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದರು. ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಸಿಎಂಗೆ ಸಾಧ್ಯವಾಗಲಿಲ್ಲ. ನಂತರ ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿದರು. ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದಾರೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಿ ಉತ್ತರಿಸಬೇಕಾಗಿತ್ತು ಎಂದು ತಿವಿದರು.

ಕಳೆದ 15 ತಿಂಗಳ ಅವಧಿಯಲ್ಲಿ ನಿಮ್ಮ ನೇತೃತ್ವದ ಸರ್ಕಾರ ಸಾವಿರಾರು ಕೋಟಿ ಲೂಟಿ ಮಾಡಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋರಾಡುತ್ತಿಲ್ಲ ಎಂದು ವಿಜಯೇಂದ್ರ ತಿರುಗೇಟು ನೀಡಿದರು.

ಪುಣ್ಯಾತ್ಮ ನರೇಂದ್ರ ಮೋದಿಯವರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಅವಹೇಳನಕಾರಿಯಾಗಿ ಸಿದ್ದರಾಮಯ್ಯ ಮಾತನಾಡುತ್ತಾರೆ. ಅವರ ಹಗರಣದ ಬಗ್ಗೆ ಮಾತನಾಡಿದರೆ ಬಿಜೆಪಿ ಆಡಳಿತದ ಹಗರಣಗಳು ಎಂಬ ಬೆದರು ಬೊಂಬೆ ತೋರಿಸಿ ನುಣುಚಿಕೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅಕ್ರಮಗಳ ವಿರುದ್ಧ ಸದನದ ಒಳಗೆ, ಹೊರಗೂ ಹೋರಾಡಿದ್ದೇವೆ. ಬೆಂಗಳೂರಿನಿಂದ ಮೈಸೂರು ತನಕ ಪಾದಯಾತ್ರೆಗೆ ನಿರ್ಧರಿಸಿದ್ದೇವೆ. ಆ.3ಕ್ಕೆ ಆರಂಭವಾಗಿ 10 ರಂದು ಸಮಾರೋಪವಾಗಲಿದೆ. ಸಮಾರೋಪ ಸಮಾವೇಶಕ್ಜೆ ಕೇಂದ್ರದ ನಾಯಕರು ಬರುತ್ತಾರೆ. ಶನಿವಾರ ಅದು ಇದು ಎಂದು ತಲೆ ಕೆಡಿಸಿಕೊಳ್ಳಬೇಡಿ. ಮನೆ ಕಟ್ಟಲು ಹೊರಟಿಲ್ಲ. ನಾಡಿನಲ್ಲಿ ತುಳಿತಕ್ಕೊಳಗಾದವರ ಪರ ಹೋರಾಟ ಕೈಗೆತ್ತಿಕೊಂಡಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ಕಿವಿಮಾತು ಹೇಳಿದರು.

ಸದನಕ್ಕೆ ಅವಮಾನ

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ಪಾರದರ್ಶಕ, ಭ್ರಷ್ಟಾಚಾರ ರಹಿತ ಅಂತೆಲ್ಲ ಚುನಾವಣೆಗೆ ಮುಂಚೆ ಹೇಳಿದ್ದವರು ಅದಕ್ಕೆ ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸದನ ಇರುವುದೇ ಚರ್ಚಿಸಲು. ಮುಡಾ ಅಕ್ರಮ ಪ್ರಸ್ತಾಪಿಸಿದಾಗ ಸಿಎಂ ಅಲ್ಲಿಂದ ಪಲಾಯನ ಮಾಡಿ, ಪತ್ರಿಕಾಗೋಷ್ಠಿ ನಡೆಸಿ, ಮಾಧ್ಯಮಗಳಿಗೆ ಜಾಹೀರಾತು ಕೊಟ್ಟರು. ಸದನದಲ್ಲಿದ್ದ ವಿಚಾರದ ಬಗ್ಗೆ ಹೊರಗೆ ಪತ್ರಿಕಾಗೋಷ್ಠಿ ನಡೆಸಿದ್ದು ಸದನಕ್ಕೆ ಮಾಡಿದ ಅವಮಾನ ಎಂದು ವಾಗ್ದಾಳಿ ಮಾಡಿದರು.

ಈ ಹಿಂದೆ ಕೆಂಪಣ್ಣ ಆಯೋಗ ಮಾಡಿ ಐದು ವರ್ಷ ತಳ್ಳಿದರು. ಈಗ ಅಧಿವೇಶನ ಆರಂಭ ಆಗುವ ಮುನ್ನಾ ದಿನ ಆಯೋಗ ರಚಿಸಿದ್ದಾರೆ. ನಮ್ಮ ಹೋರಾಟ ಜನರನ್ನು ತಲುಪಬೇಕು. ಅದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಒಂದು ಹಗರಣಕ್ಕೆ ಸಿಲುಕಿ ಈಗಾಗಲೇ ನಾಗೇಂದ್ರ ಎನ್ನುವ ಕುದುರೆ ಬಿದ್ದಿದೆ, ಈಗ ರಾಜ ಬೀಳುವುದಷ್ಟೇ ಉಳಿದಿದೆ ಎಂದು ಮಾರ್ಮಿಕವಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net