

ಕೊರ್ಬಾ: ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನೀಡುವ ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ. ಅದನ್ನು ರದ್ದುಗೊಳಿಸಲು ಕಾಂಗ್ರೆಸ್‌ಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ.
ಛತ್ತೀಸ್ಗಢದ ಕೊರ್ಬಾ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರೋಜ್ ಪಾಂಡೆ ಪರ ಪ್ರಚಾರ ನಡೆಸಿದ ಅವರು, ಚುನಾವಣೆಯಲ್ಲಿ ಗೆಲ್ಲಲು ಭಯೋತ್ಪಾದನೆ ಹಾಗೂ ನಕ್ಸಲ್ವಾದವನ್ನು ಕಾಂಗ್ರೆಸ್ ಘೋಷಿಸುತ್ತಿದೆ ಎಂದು ಆರೋಪಿಸಿದರು.
ಸಾರ್ವಜನಿಕವಾಗಿ ಜೋರಾಗಿ ಗಟ್ಟಿ ಧ್ವನಿಯಲ್ಲಿ ಸುಳ್ಳು ಹೇಳುವುದು ಮತ್ತು ಅದನ್ನೇ ಪುನರಾವರ್ತಿಸುವುದು ಕಾಂಗ್ರೆಸ್ ತಂತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂನರೇ ಬಾರಿಗೆ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಗೊಳಿಸುತ್ತಾರೆ ಎಂದು ಅವರು ಆರೋಪಿಸಿದರು. ಈ ಕುರಿತು ನಕಲಿ ವಿಡಿಯೋವನ್ನು ಹಂಚಿದ್ದಾರೆ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ ಆದರೆ ಮೀಸಲಾತಿಯನ್ನು ತೆಗೆದು ಹಾಕಲಿಲ್ಲ. ಹಾಗೆ ಮಾಡುವುದು ಇಲ್ಲ ಎಂದು ಗೃಹ ಸಚಿವ ಅಮಿತ್ ಷಾ ಅವರು ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿ ಅಧಿಕಾರ ಅವಧಿಯಲ್ಲಿ 370ನೇ ವಿಧಿ ಮತ್ತು ತ್ರಿವಳಿ ತಲಾಖ್ ರದ್ದುಗೊಳಿಸಲಾಯಿತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಜಾರಿಗೊಳಿಸಲಾಯಿತು. ನಮಗೆ ಬಹುತವಿದ್ದರೂ ನಾವು ಮೀಸಲಾತಿಯನ್ನು ರದ್ದುಗೊಳಿಸಲಿಲ್ಲ. ಅದನ್ನು ರದ್ದುಗೊಳಿಸಲು ಕಾಂಗ್ರೆಸ್ ಅನ್ನು ಬಿಡಲಾರೆವು ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಷಾ, " ಗಾಂಧಿ ಕುಟುಂಬಕ್ಕಾಗಿ ನೀವು ಯಾಕೆ ಸುಳ್ಳು ಹೇಳುತ್ತೀರಿ ? ಜೂನ್ 4 ಕಾಂಗ್ರೆಸ್ ಸೋಲಿನ ಬಳಿಕ ಎಲ್ಲಾ ಆರೋಪಗಳನ್ನು ನಿಮ್ಮ ಮೇಲೆ ಹೊರಿಸಲಾಗುವುದು. ಸಹೋದರ ಮತ್ತು ಸಹೋದರಿ ಸುರಕ್ಷಿತವಾಗಿರುತ್ತಾರೆ. (ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ) ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಕ್ಸಲ್ ನಿರ್ಮೂಲನೆಗೆ ಬದ್ಧ: ಮೋದಿ ಅವರು ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಛತ್ತೀಸ್‌ಗಢದಲ್ಲಿ ಎರಡು ವರ್ಷದೊಳಗೆ ನಕ್ಸಲ್ ಚಟುವಟಿಕೆಗಳನ್ನು ಬೇರುಸಹಿತ ನಿರ್ಮೂಲನೆ ಮಾಡಲಾಗುವುದು. ಮಾಜಿ ಸಿಎಂ ಭೂಪೇಶ್ ಬಘೇಲ್ ಅವಧಿಯಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಯಿತು. ಆದರೆ ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅಧಿಕಾರಕ್ಕೆ ಬಂದ ನಂತರ ಕೇವಲ ನಾಲ್ಕು ತಿಂಗಳಲ್ಲಿ 95 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಅಮಿತ್ ಷಾ ಹೇಳಿದರು. ಕೊರ್ಬಾ ಲೋಕಸಭಾ ಸ್ಥಾನಕ್ಕೆ ಮೇ 7 ರಂದು ಮತದಾನ ನಡೆಯಲಿದೆ.