

ಕಲ್ಕತ್ತಾ: ರಾಷ್ಟ್ರವ್ಯಾಪಿ ತೀವ್ರ ಸಂಚಲನ ಮೂಡಿಸಿರುವ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಬಿಜೆಪಿ ಹಾಗೂ ಟಿಎಂಸಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ. ಇತ್ತ ಘಟನೆಗೆ ಸಂಬಂಧಿಸಿದಂತೆ ನಟ-ನಟಿಯರು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುವ ಬಗ್ಗೆ ಕಿಡಿಕಾರಿರುವ ಟಿಎಂಸಿ ಸಂಸದ ಇದು ಬಿಜೆಪಿಯ ಟೂಲ್ಕಿಟ್ ಎಂದು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ ಸಂಸದ (ರಾಜ್ಯಸಭೆ) ಸಾಕೇತ್ ಗೋಖಲೆ, ಬಿಜೆಪಿ ಟೂಲ್ಕಿಟ್ ಚಾಲ್ತಿಯಲ್ಲಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು, ಮಣಿಪುರ, ಬಿಲ್ಕಿಸ್ ಬಾನೋ ಹಾಗೂ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಒಂದು ಮಾತನ್ನು ಆಡದ ಕರೀನಾ ಕಪೂರ್ ಈಗ ಟ್ರೈನಿವೈದ್ಯೆ ಸಾವಿನ ಕುರಿತು ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗುರುವಾರ (ಆಗಸ್ಟ್ 15) ಬಾಲಿವುಡ್ ತಾರೆಯರಾದ ಆಲಿಯಾ ಭಟ್, ಸ್ವರಾ ಭಾಸ್ಕರ್, ವಿಜಯ್ ವರ್ಮಾ, ಹೃತಿಕ್ ರೋಷನ್, ಪರಿಣಿತಿ ಚೋಪ್ರಾ, ಆಯುಷ್ಮಾನ್ ಖುರಾನಾ, ಕಂಗನಾ ರನೌತ್, ಕರೀನಾ ಕಪೂರ್ ಖಾನ್ ಮತ್ತು ಪ್ರೀತಿ ಜಿಂಟಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದ್ದರು.
ಘಟನೆಗೆ ಸಂಬಂಧಿಸಿದಂತೆ ನಟಿ ಕರೀನಾ ಕಪೂರ್ ಖಾನ್ ಅವರು 12 ವರ್ಷಗಳ ನಂತರ ಅದೇ ಕಥೆ, ಅದೇ ಪ್ರತಿಭಟನೆ. ಆದರೆ ನಾವು ಇನ್ನೂ ಬದಲಾವಣೆಗಾಗಿ ಕಾಯುತ್ತಿದ್ದೇವೆ ಪೋಸ್ಟ್ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಸಾಕೇತ್ ಗೋಖಲೆ ಇದು ಬಿಜೆಪಿಯ ಟೂಲ್ಕಿಟ್ ಎಂದು ಆರೋಪಿಸಿ ಟ್ವೀಟ್ ಮಾಡಿ ಡಿಲೀಟ್ ಮಾಡಿದ್ದರರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.