ಸಿಎಂ ರಾಜೀನಾಮೆಗೆ ಒತ್ತಾಯಿಸಿ 17ರಂದು ಬಿಜೆಪಿ ಪ್ರತಿಭಟನೆ

BJP poster
Published on

ಬೆಂಗಳೂರು: ಕಾಲ್ತುಳಿತ ದುರಂತದಲ್ಲಿ 11 ಯುವಜನರು ಬಲಿಯಾದ ನೈತಿಕ ಹೊಣೆ ಹೊತ್ತ ಸಿಎಂ ಸಿದ್ದರಾಮಯ್ಯ ರಾಜೀನಾಮೆ, ಕಾಂಗ್ರೆಸ್ ಸರ್ಕಾರದ ವಜಾಕ್ಕೆ ಆಗ್ರಹಿಸಿ 17ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಈ ಹೋರಾಟ ನಡೆಯಲಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಸೇರಿ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸತ್ಯ ಹೇಳಿದ ತಪ್ಪಿಗೆ ಬಲಿಪಶು

ಆರ್‌ಸಿಬಿ ಕ್ರಿಕೆಟ್ ತಂಡ ಚಾಂಪಿಯನ್ ಆದ ರಾತ್ರಿಯಿಡಿ ಅಭಿಮಾನಿಗಳು ವಿಜಯೋತ್ಸವ ಆಚರಿಸಿದ್ದಾರೆ. ಮರು ದಿನವೇ ಭದ್ರತಾ ವ್ಯವಸ್ಥೆ ಕಲ್ಪಿಸುವುದು ಕಷ್ಟ ಸಾಧ್ಯವೆಂದು ಪೊಲೀಸ್ ಇಲಾಖೆ ಕಟು ಸತ್ಯವನ್ನೇ ಸರ್ಕಾರದ ಮುಂದಿಟ್ಟಿತ್ತು.

ಆದರೆ ತರಾತುರಿಯಲ್ಲಿ ಕ್ರಿಕೆಟರಿಗೆ ಸನ್ಮಾನಿಸಿ ಆಯೋಜಿಸಿದೆ. ದುರಂತದ ತಪ್ಪು ಮುಚ್ಚಿಕೊಳ್ಳಲು ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಬಲಿಪಶು ಮಾಡಿದೆ. ಕಾರ್ಯಕ್ರಮಕ್ಕೆ ಬರಬೇಕು ಎಂದು ಅಭಿಮಾನಿಗಳಿಗೆ ಬಹಿರಂಗ ಆಹ್ವಾನ ನೀಡಿದ ಡಿಪಿಎಆರ್ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ವಿಷಯಾಂತರದ ಯತ್ನ

ದುರ್ಘಟನೆಗೆ ಸರ್ಕಾರವೇ ಹೊಣೆ ಎಂದು ರಾಜ್ಯದ ಜನರು ದೂರುತ್ತಿದ್ದಾರೆ. ಆಕ್ರೋಶ ಹೊರಗೆ ಹಾಕುತ್ತಿದ್ದು, ವಿಷಯಾಂತರ ಮಾಡಲು ಜಾತಿ ಜನಗಣತಿ ವಿಷಯವನ್ನು ಸರ್ಕಾರ ಪ್ರಸ್ತಾಪಿಸಿದೆ ಎಂದು ಟೀಕಿಸಿದರು.

ಹೊಸದಾಗಿ ಸಮೀಕ್ಷೆ ನಿರ್ಧಾರವನ್ನು ಸ್ವಾಗತಿಸುತ್ತೇವೆ. ದಶಕದ ಹಿಂದಿನ ಸಮೀಕ್ಷೆ, ಅಂಕಿಅಂಶಗಳು ಹಳೆಯದಾಗಿವೆ, ಕಾನೂನು ಮಾನ್ಯವಾಗದು ಎಂದು ಪ್ರತಿಪಕ್ಷಗಳು, ಸಮುದಾಯಗಳು ಹೇಳಿದ್ದನ್ನು ಸರ್ಕಾರ ಒಪ್ಪಿದ್ದು, ವೆಚ್ಚವಾದ 167 ಕೋಟಿ ರೂ.ಗಳ ಲೆಕ್ಕ ಕೊಡಿ ಎಂದು ಕೆ.ಗೋಪಾಲಯ್ಯ ಒತ್ತಾಯಿಸಿದರು.

ಶಾಸಕ ಧೀರಜ್ ಮುನಿರಾಜು ಮಾತನಾಡಿ 11 ಜನರ ಸಾವಿಗೆ ನ್ಯಾಯ ಕೊಡಿಸುವ ಸಲುವಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು. ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಪಕ್ಷದ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್, ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net