

ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ಆಕಾಂಕ್ಷಿಯಿಂದ 21 ಲಕ್ಷ ರೂ. ಪಡೆದು ವಂಚನೆ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆ ಕಾರಟಗಿಯ ಜಿ. ತಿಮ್ಮರೆಡ್ಡಿಗೌಡ ಅವರು ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ದೆಹಲಿ ಮೂಲದ ವಿಶಾಲ್ ನಾಗ್ ಮತ್ತು ಬೆಂಗಳೂರಿನ ಜೀತು, ಗೌರವ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ತನ್ನ ಪತ್ನಿ ಜಿ.ಗಾಯತ್ರಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿ ಆಗಿದ್ದೆವು. ಮಾರ್ಚ್ 2ನೇ ವಾರದಲ್ಲಿ ತನ್ನ ಗೆಳೆಯ ಜೀತು ಎಂಬಾತನ ಕಡೆಯಿಂದ ವಿಶಾಲ್ ನಾಗ್ ಪರಿಚಯನಾದ.
ವಿಶಾಲ್ ನಾಗ್, ನಾನು ಬಿಜೆಪಿ ಪಕ್ಷದ ಕೇಂದ್ರ ಚುನಾವಣಾ ಸಮೀಕ್ಷೆ ಮುಖ್ಯಸ್ಥನಾಗಿದ್ದೆನೆ ಎಂದು ಪರಿಚಯ ಮಾಡಿಕೊಂಡ.
ಆಂತರಿಕ ಸಮೀಕ್ಷೆಯಲ್ಲಿ ನಿಮ್ಮ ಪತ್ನಿಯ ಹೆಸರು 2ನೇ ಸ್ಥಾನದಲ್ಲಿ ಇದೆ. ಮೊದಲ ಸ್ಥಾನಕ್ಕೆ ತರಲು ನನ್ನ ಕೈಯಲ್ಲಿ ಸಾಧ್ಯವಾಗುತ್ತದೆ. ಅಮಿತ್ ಶಾ ಮತ್ತು ಅರುಣ್ ಸಿಂಗ್ ಕಡೆಯಿಂದ ಕರ್ನಾಟಕ ಚುನಾವಣಾ ಸರ್ವೆ ಮಾಡುತ್ತಿದ್ದೆನೆ. ನಮ್ಮ ಟೀಮ್ ಅಂತಿಮ ಪಟ್ಟಿ ಕೊಡುವುದು. ನಿಮಗೆ ಟಿಕೆಟ್ ಕೊಡಿಸುತ್ತೆವೆ.
ಅದಕ್ಕಾಗಿ ಸರ್ವೆ ನಡೆಸುವ ಯುವಕರಿಗೆ ಹಣ ಕೊಡಲು 25 ಲಕ್ಷ ರೂ. ಆಗಲಿದೆ ಎಂದು ವಿಶಾಲ್ ನಾಗ್ ತಿಳಿಸಿದ್ದ. ಅದಕ್ಕೆ ಚೌಕಾಸಿ ಮಾಡಿ 19 ಲಕ್ಷ ರೂ. ನಗದು ಮತ್ತು 2 ಲಕ್ಷ ರೂ. ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದೆ. ಆದರೆ, ಟಿಕೆಟ್ ನನ್ನ ಪತ್ನಿಗೆ ಸಿಗಲಿಲ್ಲ. ಇದೆ ರೀತಿ ಹಲವರ ಕಡೆಯಿಂದ ಹಣ ಪಡೆದು ಮೋಸ ಮಾಡಿರುವುದು ಗೊತ್ತಾಗಿದೆ.
ಆರೋಪಿತರ ಮೊಬೈಲ್‌ಗೆ ಕರೆ ಮಾಡಿ ಹಣ ವಾಪಸ್ ಕೊಡುವಂತೆ ಕೇಳಿದಾಗ ಸಬೂಬು ಹೇಳುತ್ತಿದ್ದರು. ಇದೀಗ ಕಾಲ್ ಸ್ವೀಕರಿಸುತ್ತಿಲ್ಲ.
ಕಳೆದ 3 ತಿಂಗಳಿಂದ ಇದೇ ರೀತಿ ಸತಾಯಿಸುತ್ತಿದ್ದಾರೆ. ವಂಚನೆ ಮಾಡುವ ಉದ್ದೇಶಕ್ಕೆ ಹಣ ಪಡೆದಿದ್ದಾರೆ. ಆರೋಪಿತರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಜಿ. ತಿಮ್ಮರೆಡ್ಡಿ ಗೌಡ, ಉಲ್ಲೇಖಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತಿಂಗಳ ಹೋಟೆಲ್ ಬಿಲ್ ಪಾವತಿ :
ವಿಧಾನಸಭಾ ಚುನಾವಣೆಗೂ ಮೊದಲು ಟಿಕೆಟ್ ಕೊಡಿಸುವ ನೆಪದಲ್ಲಿ ಖಾಸಗಿ ಹೋಟೆಲ್‌ನಲ್ಲಿ 1 ತಿಂಗಳ ಕಾಲ ವಿಶಾಲ್ ನಾಗ್ ಮತ್ತು ಗೌರವ್ ಎಂಬಾತ ಉಳಿದುಕೊಂಡಿದ್ದರು. ಹೋಟೆಲ್ ಬಿಲ್‌ನ್ನು ನನ್ನ ಕಡೆಯಿಂದ ಸಂಪೂರ್ಣ ಪಾವತಿ ಮಾಡಿಸಿದ್ದರು ಎಂದು ತಿಮ್ಮರೆಡ್ಡಿಗೌಡ ಆರೋಪಿಸಿದ್ದಾರೆ.