

| ರಾಘವ ಶರ್ಮ ನಿಡ್ಲೆ, ನವದೆಹಲಿ
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯರನ್ನು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಿದ ಬೆನ್ನಲೇ ಪಕ್ಷದ ಯುವ ಕಾರ್ಯಕರ್ತರಲ್ಲಿ ಮಿಂಚಿನ ಸಂಚಾರ ಉಂಟಾಗಿದೆ. ಮೊನ್ನೆಯಷ್ಟೇ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಯುವ ಕಾರ್ಯಕರ್ತರನ್ನು ಕಟ್ಟಿಕೊಂಡು ಟಿಎಂಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ಸೂರ್ಯ, ಬಂಗಾಳ ರಾಜಕಾರಣದಲ್ಲೂ ಬಿರುಗಾಳಿ ಎಬ್ಬಿಸಿ ಬಂದಿದ್ದಾರೆ. ಮತ್ತೊಂದೆಡೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಕೇಂದ್ರದ ನೀತಿಗಳ ವಿರುದ್ಧ ಸತತ ಹೋರಾಟಗಳನ್ನು ನಡೆಸಿದ್ದಾರೆ.
ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ರಾಷ್ಟ್ರೀಯ ಯುವ ವೇದಿಕೆಗೆ ಕನ್ನಡಿಗರ ಸಾರಥ್ಯ ಸಿಕ್ಕಿರುವುದು ರಾಜ್ಯದ ಮಟ್ಟಿಗೆ ಮಹತ್ವದ ಬೆಳವಣಿಗೆ. ಹಾಗೆ ನೋಡಿದರೆ, ಎರಡೂ ಪಕ್ಷಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಯುವ ಕಾರ್ಯಕರ್ತರನ್ನು ಮುನ್ನಡೆಸುವ ಅವಕಾಶ ಕನ್ನಡಿಗರಿಗೆ ದೊರಕಿರುವುದು ಇದೇ ಮೊದಲು.
ಒಂದು ವರ್ಷದ ಹಿಂದೆ ರಾಜ್ಯದ ಭದ್ರಾವತಿ ಮೂಲದ ಬಿ.ವಿ. ಶ್ರೀನಿವಾಸ್‌ರನ್ನು ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಅಂದಿನಿಂದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಹೋರಾಟ ತೀವ್ರಗೊಳಿಸಿರುವ ಶ್ರೀನಿವಾಸ್, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಗಮನ ಸೆಳೆಯುವಲ್ಲೂ ಯಶಸ್ವಿಯಾಗಿದ್ದಾರೆ. ಸಾಮಾನ್ಯವಾಗಿ, ಉತ್ತರ ಭಾರತದ ಶಕ್ತಿ ರಾಜಕಾರಣದ ಮುಂದೆ ದಕ್ಷಿಣ ಭಾರತೀಯರು ಸ್ವಂತ ವರ್ಚಸ್ಸು ಬೆಳೆಸಿಕೊಳ್ಳುವುದು ಸುಲಭದ ಮಾತಲ್ಲ. ಕಾಂಗ್ರೆಸ್ ಮಟ್ಟಿಗೆ ಶ್ರೀನಿವಾಸ್ ಸಬಲರಾಗುತ್ತಿದ್ದರೆ, ಬಿಜೆಪಿಯಲ್ಲಿ ತೇಜಸ್ವಿ ಸೂರ್ಯ ಕೂಡ ಭರವಸೆ ಮೂಡಿಸಿದ್ದಾರೆ.
ಹಿಂದೆ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ತೇಜಸ್ವಿ ಸೂರ್ಯ, 2018ರ ವಿಧಾನಸಭೆ ಚುನಾವಣೆ ವೇಳೆ ಮಾಹಿತಿ ತಂತ್ರಜ್ಞಾನ ಮತ್ತು ಸೋಷಿಯಲ್ ಮೀಡಿಯಾ ವಿಭಾಗದ ಉಸ್ತುವಾರಿ ಹೊತ್ತಿದ್ದರು ಮತ್ತು 2019ರ ಲೋಕಸಭೆ ಚುನಾವಣೆ ವೇಳೆ ಪಕ್ಷದ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ ಸದಸ್ಯರಾಗಿದ್ದರು. ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಸಿಕ್ಕಿತ್ತು.
ಲಾಕ್‌ಡೌನ್ ವೇಳೆ ಯುವ ಕಾಂಗ್ರೆಸ್ ಸಕ್ರಿಯವಾಗಿದ್ದಾಗ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ ಪೂನಂ ಮಹಾಜನ್ ಬೀದಿಗಿಳಿದು ಕೆಲಸ ಮಾಡಲಿಲ್ಲ ಎಂಬ ಅಪಸ್ವರಗಳೆದ್ದಿದ್ದವು. ಇದು ಕೂಡ ತೇಜಸ್ವಿ ಆಯ್ಕೆಗೆ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಸೂರ್ಯರ ಮುಂದೆ ಪ್ರಬಲ ಸವಾಲಿದೆ.
ಸಂಸತ್‌ನಲ್ಲಿ ತೇಜಸ್ಸು: ತೇಜಸ್ವಿ ಸೂರ್ಯಗೆ ಸಣ್ಣ ವಯಸ್ಸಲ್ಲೇ ಲೋಕಸಭೆ ಟಿಕೆಟ್ ಸಿಕ್ಕರೂ, ಸಂಸದರಾಗಿ ಕ್ಷೇತ್ರ ಹಾಗೂ ರಾಷ್ಟ್ರಕ್ಕೆ ಸಂಬಂಧಿಸಿದ ಹಲವು ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಲೋಕಸಭೆಯಲ್ಲಿ ಈಗಾಗಲೇ ಅನೇಕ ಜ್ವಲಂತ ವಿಷಯಗಳನ್ನು ಪ್ರಸ್ತಾಪಿಸಿ ಪಕ್ಷ-ವಿಪಕ್ಷಗಳ ಮುಖಂಡರ ಗಮನ ಸೆಳೆದಿದ್ದಾರೆ.
ಬಿ.ವಿ. ಶ್ರೀನಿವಾಸ್-ಸೂರ್ಯ ನಡುವೆ 10 ವರ್ಷಗಳ ಅಂತರವಿದೆ. ಹಲವು ರಾಜ್ಯಗಳಲ್ಲಿ ಬಿಜೆಪಿಯ ಪ್ರಬಲ ರಾಜಕೀಯ ಎದುರಾಳಿ ಕಾಂಗ್ರೆಸ್ ಪಕ್ಷವೇ ಆಗಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಇವರಿಬ್ಬರ ‘ಪೊಲಿಟಿಕಲ್ ಫೈಟ್’ ವ್ಯಾಪಕ ಕುತೂಹಲ ಕೆರಳಿಸಿದೆ.
ತೇಜಸ್ವಿ ಸೂರ್ಯ ಶಕ್ತಿ ಮತ್ತು ಸವಾಲು
ಬಿ.ವಿ. ಶ್ರೀನಿವಾಸ್ ಶಕ್ತಿ ಮತ್ತು ಸವಾಲು