ನಿರ್ಣಾಯಕ ಕಾರ್ಯತಂತ್ರದತ್ತ ಕಮಲಪಡೆ ಹೆಜ್ಜೆ

BJP symbol
Published on

ಬೆಂಗಳೂರು: ರಾಜ್ಯ ಸರ್ಕಾರದ ನಡೆ-ನುಡಿ, ನೀತಿ- ನಿರ್ಧಾರಗಳ ವಿರುದ್ಧ ಸೆಡ್ಡು ಹೊಡೆದು, ಹೋರಾಟಕ್ಕೆ ಇಳಿಯಲು ರಾಜ್ಯದ ಕೇಸರಿ ಪಡೆ ಉತ್ಸುಕವಾಗಿದೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯ ಪ್ರಮುಖರ ಸಮಿತಿ (ಕೋರ್ ಕಮಿಟಿ) ಸಭೆ ಸೋಮವಾರ ಬೆಳಗ್ಗೆ 11ಕ್ಕೆ ನಿಗದಿಯಾಗಿದೆ. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಮೊದಲ ಬಾರಿಗೆ ಈ ಸಭೆ ನಡೆಯಲಿದೆ.

ಸಂಘಟನಾತ್ಮಕವಾಗಿ ಮುಂದಿನ ಕಾರ್ಯಕತಂತ್ರ, ಜನ ಪರವಾಗಿ ಕೆಲಸ ಮಾಡಲು ಹೋರಾಟದ ತಂತ್ರಗಾರಿಕೆ ಹೆಣೆಯುವುದು ಈ ಸಭೆಯ ಪ್ರಧಾನ ಕಾರ್ಯಸೂಚಿ ಪಟ್ಟಿಯಲ್ಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಚರ್ಚೆ ಸಾಧ್ಯತೆ

ಮುಂದಿನ ಲೋಕಸಭೆ ಚುನಾವಣೆ ಪೂರ್ವ ತಯಾರಿ ಭಾಗವಾಗಿ ಸಂಘಟನಾ ಪ್ರವಾಸದ ರೂಪ- ರೇಷೆ, ಕಾರ್ಯಕರ್ತರಲ್ಲಿ ಚೈತನ್ಯ ತುಂಬಲು ಕೈಗೆತ್ತಿಕೊಳ್ಳಬೇಕಾದ ಸಂಘಟನಾ ಕಾರ್ಯಯೋಜನೆ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಮೂರು ತಿಂಗಳಲ್ಲಿ ವರ್ಗಾವಣೆ ದಂಧೆ, ಗುತ್ತಿಗೆದಾರರ ಮೇಲೆ ಕಮಿಷನ್ ಒತ್ತಡವು ಭ್ರಷ್ಟಾಚಾರದ ಅಸಲಿ ಮುಖವನ್ನು ಬಯಲುಗೊಳಿಸಿದೆ. ತನಿಖೆ ಹೆಸರಿನಲ್ಲಿ ದ್ವೇಷದ ರಾಜಕಾರಣ, ಸ್ವಜನಪಕ್ಷಪಾತ, ಯೋಜನೆಗಳ ನೆರವಿನಲ್ಲಿ ಮಿತಿಯಿಲ್ಲದ ಓಲೈಕೆ, ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಅಭಿವೃದ್ಧಿ ಕುಂಠಿತಗೊಳಿಸಿರುವುದು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಾಸನಾತ್ಮಕ ಅನುದಾನದಲ್ಲಿ 11,500 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ, ವೈಲ್ಯಗಳ ಬಗ್ಗೆ ಚರ್ಚಿಸಲಿದೆ. ಜನರಿಗೆ ಧ್ವನಿಯಾಗುವ ಜತೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಕಾಂಗ್ರೆಸ್ ಸರ್ಕಾರದ ವಿರೋಧಿ ಭಾವನೆಯನ್ನು ಗಟ್ಟಿಗೊಳಿಸುವ ತಂತ್ರಗಾರಿಕೆಯನ್ನು ಹೆಣೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಕಾರಿಣಿ ಮುಂದೂಡಿಕೆ

ರಾಜ್ಯದ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರನ್ನು ತೆಲಂಗಾಣ ಚುನಾವಣೆ ಪೂರ್ವ ತಯಾರಿಗೆ ಉಸ್ತುವಾರಿಗಳನ್ನಾಗಿ ವರಿಷ್ಠರು ನೇಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆ.26ಕ್ಕೆ ಆಯೋಜಿಸಿದ್ದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯು ಮುಂದೂಡಿಕೆಯಾಗಿದೆ.

ತೆಲಂಗಾಣ ವಿಧಾನಸಭೆ ಚುನಾವಣೆಗೆ ಉಸ್ತುವಾರಿಗಳಾಗಿರುವ ಶಾಸಕರು ನಿಯೋಜಿತ ವಿಧಾನಸಭೆ ಕ್ಷೇತ್ರದಲ್ಲಿ 10 ದಿನಗಳ ಕಾಲ (ಆ.28) ಬಿಡಾರ ಹೂಡಿ, ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಾರೋಗ್ಯ ಹಾಗೂ ಭಾಷೆ ಸಮಸ್ಯೆಯ ಕಾರಣಕ್ಕೆ ಕೆಲವು ಶಾಸಕರನ್ನು ಕೈಬಿಡಲಾಗಿದೆ ಎಂದು ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net