

ಬೆಂಗಳೂರು: ಪ್ರತಿಲೋಕಸಭೆ ಕ್ಷೇತ್ರಕ್ಕೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಲು ಬಿಜೆಪಿ ಲೋಕಸಭೆ ಕ್ಷೇತ್ರಗಳ ಮೊದಲ ಹಂತದ ಕ್ಲಸ್ಟರ್‌ಗಳ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ತಿಳಿಸಿದರು.
ಬುಧವಾರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಲೋಕಸಭೆ ಚುನಾವಣೆ ಸಿದ್ಧತೆಗಾಗಿ ಕರೆದ ಈ ಸಭೆ ನಮಗೆ ಶಕ್ತಿ ನೀಡಲಿದೆ. ಚುನಾವಣೆಯಲ್ಲಿ ನಮ್ಮ ಕಾರ್ಯಾಚರಣೆ, ಯೋಚನೆ, ಯೋಜನೆಗಳು ಹೇಗೆ ಇರಬೇಕೆಂಬ ಬಗ್ಗೆ ಅಡಿಪಾಯ ಹಾಕಲಾಗಿದೆ.
ಕ್ಲಸ್ಟರ್‌ಗಳ ಸಭೆ ಮುಗಿದ ನಂತರ ಮುಂದೆ ಜಿಲ್ಲಾಮಟ್ಟದಲ್ಲೂ ಸಭೆ ಕರೆಯುತ್ತೇವೆ ಎಂದು ಪಕ್ಷದ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ. ಒಂದು ಹೊಸ ಮಾದರಿಯ ಚಟುವಟಿಕೆ ಪಕ್ಷದಲ್ಲಿ ಆರಂಭವಾಗಿದೆ ಎಂದು ಡಿ.ವಿ.ಸದಾನಂದಗೌಡ ಹೇಳಿದರು.
ಅಲ್ಲಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು, ಚಿಕ್ಕಪುಟ್ಟ ಗೊಂದಲಗಳಿರುವುದು ಈ ಸಭೆಯಿಂದ ಗೊತ್ತಾಯಿತು. ಒಂದೆರಡು ದಿನಗಳೊಳಗೆ ಮುಗಿದುಹೋಗಲಿವೆ. ಸಂಘಟನೆ ಹೊಸ ರೂಪ ಪಡೆದುಕೊಂಡಿದೆ ಎಂದು ಹೇಳಿದರು.
ಕೆಳಗಿನ ಹಂತದಿಂದ ಬೂತ್‌ಮಟ್ಟದ ಕಾರ್ಯಕರ್ತರಿಗೆ ಶಕ್ತಿ ತುಂಬಲಿದೆ. ಸಭೆಯಲ್ಲಿ ಪಾಲ್ಗೊಂಡ ಪ್ರಮುಖರು ತಮ್ಮ ಜಿಲ್ಲೆ, ಮಂಡಲಗಳಿಗೆ ತೆರಳಿ ವಿಷಯಗಳನ್ನು ತಿಳಿಸಲಿದ್ದಾರೆ. ಎಲ್ಲ ಸಲಹೆ- ಸೂಚನೆಗಳನ್ನು ಸಂಗ್ರಹಿಸಿ ಕೊಡಬಹುದು ಎಂದು ಪಕ್ಷದ ರಾಜ್ಯಾಧ್ಯಕ್ಷರು ತಿಳಿಸಿದ್ದು, ಹೊಸ ಕಾರ್ಯತಂತ್ರ ರೂಪಿಸಲು ಪೂರಕವಾಗಲಿದೆ ಎಂದರು.
ರಾಜಕೀಯ ಸಮಾರಂಭ ಎಂಬ ಕಾರಣಕ್ಕೆ ಕಾಂಗ್ರೆಸ್ಸಿಗರು ರಾಮಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸಿದ್ದಾರೆ. ಹುಚ್ಚುತನಕ್ಕೂ ಒಂದು ಮಿತಿ ಇದೆ. ಹುಚ್ಚುತನದ ಪರಮಾವಧಿಯನ್ನು ಇವರು ದಾಟಿ ಹೋಗಿದ್ದಾರೆ. ಕಾಂಗ್ರೆಸ್‌ನವರ ಹಣೆಬರಹ ಇದು ಹೊಸದಲ್ಲವೆಂದು ಕುಟುಕಿದರು.
ಶ್ರೀರಾಮನ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಕೇಸು ನಡೆಯುತ್ತಿರುವಾಗ ಅಫಿಡವಿಟ್ ಹಾಕಿದ್ದು ಎಲ್ಲರಿಗೂ ಗೊತ್ತಿದೆ. ರಾಮಸೇತುವೆ ಬಗ್ಗೆ ಇದ್ಯಾವ ಇಂಜಿನಿಯರ್ ರಾಮಸೇತುವೆ ಪ್ರಾಜೆಕ್ಟ್ ರಿಪೋರ್ಟ್ ಕೊಟ್ಟವರು ಎಂದು ಹೇಳಿದ್ದು ಗೊತ್ತಿದೆ. ಕೇವಲವಾಗಿ ಹುಚ್ಚು ಹುಚ್ಚುತನದ ಮಾತನಾಡಿದ್ದು ಗೊತ್ತಿದೆ. ಕಾರ್ಯಕ್ರಮದಿಂದ ದೂರವಿರುವ ನಿರ್ಧಾರದ ಮೂಲಕ ಪೂರ್ತಿ ಹುಚ್ಚರಾದುದು ಗೊತ್ತಾಗುತ್ತದೆ ಡಿ.ವಿ.ಸದಾನಂದಗೌಡ ಲೇವಡಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ ಕ್ಷೇತ್ರಾವಾರು ಪರಿಸ್ಥಿತಿ ತಿಳಿಯಲು, ಮಾಹಿತಿ ಸಂಗ್ರಹಿಸುವುದಕ್ಕಾಗಿ ಈ ಸಭೆ ಕರೆಯಲಾಗಿತ್ತು. ಟಿಕೆಟ್‌ಗಳ ನಿರ್ಣಯ ಅಥವಾ ಅಭ್ಯರ್ಥಿ ಅಂತಿಮಗೊಳಿಸುವುದಕ್ಕಲ್ಲವೆಂದು ಸ್ಪಷ್ಟಪಡಿಸಿದರು.
ರಣತಂತ್ರ ರೂಪಿಸಲು ಸೂಕ್ತ ಮಾಹಿತಿ ಅಗತ್ಯವಿದೆ. ಅಭ್ಯರ್ಥಿಗಳ ಆಯ್ಕೆ ಏನಿದ್ದರೂ ಪಕ್ಷದ ಕೇಂದ್ರೀಯ ಚುನಾವಣೆ ಸಮಿತಿ ಸಭೆಯಲ್ಲಿ ಅಂತಿಮವಾಗಲಿದೆ. ಹಾಸನ, ಮಂಡ್ಯ ಸೇರಿ ಹಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅಭಿಪ್ರಾಯಗಳು ವ್ಯಕ್ತವಾಗಲಿದ್ದು, ವರಿಷ್ಠರು ಎಲ್ಲ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ಕುಮಾರ್, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಿ.ಟಿ.ರವಿ ಇದ್ದರು.