ದೆಹಲಿ ಮತದಾರರಿಂದ ಬಿಹಾರದಲ್ಲಿ ಮತದಾನ!; ಆಪ್​ ನಾಯಕನ ಆರೋಪಕ್ಕೆ ಬಿಜೆಪಿ ತಿರುಗೇಟು | Saurabh Bharadwaj

Saurabh Bharadwaj
Published on

ದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೂ ಮುನ್ನ ಆಮ್ ಆದ್ಮಿ ಪಕ್ಷದ (AAP) ನಾಯಕ ಸೌರಭ್ ಭಾರದ್ವಾಜ್ ( Saurabh Bharadwaj) ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಬಿಜೆಪಿ ಇತರ ರಾಜ್ಯಗಳಿಂದ ಮತದಾರರನ್ನು ಬಿಹಾರಕ್ಕೆ ಮತ ಚಲಾಯಿಸಲು ಸಾಗಿಸುವ ಮೂಲಕ ವಂಚನೆ ಮಾಡಿದೆ ಎಂದು ಆರೋಪಿಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಭಾರದ್ವಾಜ್​, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ಬಿಜೆಪಿ ತನ್ನ ಕಟ್ಟಾ ಮತದಾರರನ್ನು ಮೊದಲೆ ಗುರುತಿಸಿದೆ ಮತ್ತು ದೆಹಲಿ ಅಥವಾ ಹರಿಯಾಣದಲ್ಲಿ ಅವರ ಹೆಸರುಗಳು ಅಳಿಸಿಹೋಗದಂತೆ ನೋಡಿಕೊಂಡಿದೆ. ಇದೇ ಮತದಾರರನ್ನು ವಿಶೇಷ ರೈಲುಗಳಲ್ಲಿ ಬಿಹಾರಕ್ಕೆ ಕಳುಹಿಸಲಾಗಿದ್ದು, ಟಿಕೆಟ್‌ಗಳು ಮತ್ತು ಲಾಜಿಸ್ಟಿಕ್ಸ್ ವೆಚ್ಚವನ್ನು ಬಿಜೆಪಿ ಕಾರ್ಯಕರ್ತರು ನೋಡಿಕೊಳ್ಳುತಿದ್ದಾರೆ ಎಂದರು.

ಮತ್ತೊಂದು ಪೋಸ್ಟ್‌ನಲ್ಲಿ, ಅವರು ಕರ್ನಾಲ್ ರೈಲು ನಿಲ್ದಾಣದ ದೃಶ್ಯಗಳನ್ನು ತೋರಿಸಿದರು, ಸ್ಥಳೀಯ ಬಿಜೆಪಿ ಜಿಲ್ಲಾಧ್ಯಕ್ಷರು ಬಿಹಾರಕ್ಕೆ ಮತದಾರರನ್ನು ಕಳುಹಿಸುತ್ತಿರುವುದನ್ನು ಮೇಲ್ವಿಚಾರಣೆ ಮಾಡುತ್ತಿರುವುದು ಕಂಡುಬಂದಿದೆ. ಇದು ಕೇವಲ ಮೋಸವಲ್ಲ, ಪ್ರಜಾಪ್ರಭುತ್ವದ ಸಂಘಟಿತ ಕಳ್ಳತನ ಎಂದು ಕರೆದಿದ್ದಾರೆ. ಛತ್ ಪೂಜೆಯ ಹೆಸರಿನಲ್ಲಿ ಓಡಿಸಲಾದ ವಿಶೇಷ ರೈಲುಗಳ ಬಗ್ಗೆಯೂ ಉಲ್ಲೇಖಿಸಿರುವ ಭಾರದ್ವಾಜ್​, ಅದರ ನಿಜವಾದ ಉದ್ದೇಶ ರಾಜಕೀಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಒಂದು ವೇಳೆ ಆ ವಿಶೇಷ ರೈಲುಗಳು ಛಠ್‌ಗಾಗಿ ಓಡಿಸಿದ್ದರೆ, ಹಬ್ಬದ ನಂತರವೂ ಅವುಗಳನ್ನು ಮುಂದುವರೆಸಲಾಗುತ್ತಿದೆ? ಕಾರಣ ಸ್ಪಷ್ಟ, ಸಾರ್ವಜನಿಕ ಹಣವನ್ನು ಪ್ರಜಾಪ್ರಭುತ್ವವನ್ನು ಖರೀದಿಸಲು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗವು ಪಟ್ಟಿಯಿಂದ ನಕಲಿ ಮತದಾರರನ್ನು ತೆಗೆದುಹಾಕುವುದಾಗಿ ಹೇಳಿಕೊಂಡಿದ್ದರೂ, ರಾಜ್ಯಸಭಾ ಸಂಸದ ರಾಕೇಶ್ ಸಿನ್ಹಾ ಮತ್ತು ದೆಹಲಿ ಬಿಜೆಪಿ ಪೂರ್ವಾಂಚಲ್ ಮೋರ್ಚಾ ಅಧ್ಯಕ್ಷ ಸಂತೋಷ್ ಓಜಾ ಸೇರಿದಂತೆ ಕೆಲವು ಬಿಜೆಪಿ ನಾಯಕರು ದೆಹಲಿ ಮತ್ತು ಬಿಹಾರ ಎರಡರಲ್ಲೂ ಮತ ಚಲಾಯಿಸಿದ್ದಾರೆ ಎಂದು ಭಾರದ್ವಾಜ್ ಆರೋಪಿಸಿದರು.

ರಾಕೇಶ್ ಸಿನ್ಹಾ, ಸಂತೋಷ್ ಓಜಾ ತಿರುಗೇಟು...

ನನ್ನ ಹೆಸರು ದೆಹಲಿಯ ಮತದಾರರ ಪಟ್ಟಿಯಲ್ಲಿ ಮೊದಲೇ ಇತ್ತು. ನಾನು ಬಿಹಾರದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ, ಅದನ್ನು ಬೇಗುಸರಾಯ್‌ನಲ್ಲಿರುವ ನನ್ನ ಹಳ್ಳಿಗೆ ಸ್ಥಳಾಂತರಿಸಿದೆ. ಇದಕ್ಕಾಗಿ ನಾನು ಮಾನನಷ್ಟ ಮೊಕದ್ದಮೆ ಹೂಡಬೇಕೇ?" ಎಂದು ಸಿನ್ಹಾ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಇತ್ತ ಸಂತೋಷ್ ಓಜಾ, ತಮ್ಮ ಸೋಲುಗಳಿಂದ ಹತಾಶರಾಗಿರುವ ಆಪ್​ ನಾಯಕರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ, ನಾನು ಬಕ್ಸಾರ್‌ನಿಂದ ಸ್ಪರ್ಧಿಸಲು ಯೋಜಿಸಿದ್ದರಿಂದ ದೆಹಲಿಯ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದುಹಾಕಲು ಮತ್ತು ಬಿಹಾರದಲ್ಲಿ ಮತದಾರರಾಗಿ ನೋಂದಾಯಿಸಲು ನಾನು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿದ್ದೇನೆ ಎಂದು ಓಜಾ ಪಿಟಿಐಗೆ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net