

ಬೆಂಗಳೂರು: ಬಹು ನಿರೀಕ್ಷಿತ ಎರಡೂ ಹುದ್ದೆಗಳ ಭರ್ತಿಯಾದ ನಂತರ ಬಿಜೆಪಿ ತಳಮಟ್ಟದ ಕಾರ್ಯಕರ್ತರ ಉತ್ಸಾಹ ಕ್ರಮೇಣ ಚಿಗುರತೊಡಗಿದೆ. ಆದರೆ ಈ ಸ್ಥಾನಗಳ ಕಣ್ಣಿಟ್ಟಿದ್ದ, ಉನ್ನತಸ್ಥಾನಮಾನದ ನಿರೀಕ್ಷೆ ಹೊಂದಿರುವ ಹಿರಿತಲೆಗಳ ಕೋಪತಾಪ ಜೋಡೆತ್ತುಗಳಿಗೆ ಕಸಿವಿಸಿ ತಂದೊಡ್ಡಿದೆ.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಕಟ್ಟಬೇಕು, ಪಕ್ಷ ಮುನ್ನಡೆಸಬೇಕು ಎಂಬ ವರಿಷ್ಠರ ಸೂಚನೆಯಂತೆ ಪಕ್ಷದ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಾಗಿದ್ದಾರೆ. ಜೋಡುತ್ತುಗಳಂತೆ ನಾನು, ವಿಧಾನಸಭೆ ವಿರೋಧ ಪಕ್ಷದ ನಾಯಕ ರಾಜ್ಯವನ್ನು ಸುತ್ತುತ್ತೇವೆ ಎಂದು ಹೇಳಿದ್ದಾರೆ.
ಬೂತ್‌ಮಟ್ಟದ ಅಧ್ಯಕ್ಷರ ಮನೆಗೆ ಭೇಟಿ ನೀಡುವ ಮೂಲಕ ವರಿಷ್ಠರ ಸೂಚನೆ ಪಾಲಗೆ ಬದ್ಧವೆಂಬ ಸಂದೇಶ ರವಾನಿಸಿದ್ದು, ಕಾರ್ಯಕರ್ತರ ಪಡೆಯಲ್ಲೂ ಹೊಸ ಉಮೇದಿ ತುಂಬಲಾರಂಭಿಸಿದ್ದಾರೆ. ಒಂದೆಡೆಯಿಂದ ವಿಜಯೇಂದ್ರ, ಮತ್ತೊಂದೆಡೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸುತ್ತುವ ಜತೆಗೆ ಬರ ಅಧ್ಯಯನ ಪ್ರವಾಸ ಮೂಲಕದ ಜನರಿಗೆ ಧ್ವನಿಯಾಗುವ ಕಸರತ್ತಿಗೆ ಕೈ ಹಾಕಿದ್ದಾರೆ.
ಹೊಸ ಸಮೀಕರಣ ಸೂತ್ರವು ವರ್ಕೌಟ್ ಆಗುತ್ತದೆ ಎಂದು ವರಿಷ್ಠರಿಗೆ ಖಾತರಿಪಡಿಸುವುದು ಮತ್ತು ಹಿರಿಯರು, ಆಕಾಂಕ್ಷಿಗಳನ್ನು ಸಮಾಧಾನಪಡಿಸಿವುದುದು ವಿಜಯೇಂದ್ರ ಮತ್ತು ಆರ್.ಅಶೋಕ್ ಮುಂದಿರುವ ದೊಡ್ಡ ಸವಾಲುಗಳು.
ಹಿರಿಯರ ಕೋಪತಾಪ ಶಮನ ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದು, ವಿಜಯೇಂದ್ರ ಪ್ರಯತ್ನಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತೆರೆಮರೆಯಲ್ಲಿ ನಿಂತು ಸಾಥ್ ನೀಡುತ್ತಿದ್ದಾರೆ.
ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಸಿ.ಟಿ.ರವಿಯವರೊಂದಿಗೆ ಉಪಾಹಾರದೊಂದಿಗೆ ಔಪಚಾರಿಕ ಮಾತುಕತೆಯಾಗಿದ್ದು, ಎಲ್ಲ ಬಗೆಹರಿದಿದೆ ಎಂದು ತಕ್ಷಣಕ್ಕೆ ಹೇಳಲಾಗದು. ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ರೇಣುಕಾಚಾರ್ಯ, ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಚಿಕ್ಕನಗೌಡರ್ ಮುನಿಸು ಬಹುತೇಕ ಶಮನವಾಗಿದ್ದು, ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ರಾಜಿಸಂಧಾನ ಪ್ರಯತ್ನ ಮುಂದುವರಿದಿದೆ.
ಮಾಜಿ ಸಚಿವರಾದ ವಿ.ಸೋಮಣ್ಣ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿಗುಂಡಿನ ಮಾತುಗಳು ಬಹಿರಂಗವಾಗಿ ಹೊರಹೊಮ್ಮುತ್ತಿದ್ದರೆ, ಮಾಜಿ ಮಂತ್ರಿ ಅರವಿಂದ ಲಿಂಬಾವಳಿ, ಶಾಸಕ ಅರವಿಂದ ಬೆಲ್ಲದ ಬುಸುಗುಡುತ್ತಿದ್ದಾರೆ.
ಸಿಟ್ಟು ಇಲ್ಲಿಗೆ ನಿಲ್ಲುವುದಿಲ್ಲ, ದೆಹಲಿಗೂ ತಲುಪಿಸುತ್ತೇವೆ ಎಂದು ವಿ.ಸೋಮಣ್ಣ ಸ್ಪಷ್ಟವಾಗಿ ಸಾರಿದ್ದು, ಡಿಸೆಂಬರ್ ಎರಡನೇ ವಾರದಲ್ಲಿ ವರಿಷ್ಠರನ್ನು ಭೇಟಿ ಮಾಡಲು ಯೋಚಿಸಿದ್ದಾರೆ. ಪಂಚರಾಜ್ಯಗಳ ಚುನಾವಣೆ ಲಿತಾಂಶ ಪ್ರಕಟವಾಗಿರುತ್ತದೆ. ವರಿಷ್ಠರು ಕಾಲಾವಕಾಶ ನೀಡಲಿದ್ದಾರೆ. ಪೂರಕವಾದ ಸಂದೇಶವೊಂದು ಬಂದಿದೆ ಎಂದು ವಿ.ಸೋಮಣ್ಣ ಹೇಳಿದ್ದು, ಯತ್ನಾಳ್, ಬೆಲ್ಲದ, ಲಿಂಬಾವಳಿ, ರಮೇಶಜಾರಕಿಹೊಳಿ ಮುಂತಾದವರ ಜತೆಗೆ ದೆಹಲಿ ನಾಯಕರ ಬಳಿಗೆ ತೆರಳುವ ಮಾತನಾಡಿದ್ದಾರೆ.
ಈ ಮಧ್ಯೆ ಹಿರಿಯರ ಕೋಪ ತಮಣಿ, ಪಕ್ಷದಿಂದ ಒಂದು ಹೊರಗಿಟ್ಟವರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಲೋಕಸಭೆ ಚುನಾವಣೆಗೆ ಸಜ್ಜಾಗಬೇಕು ಎಂದು ವರಿಷ್ಠರು ಬಯಸಿದ್ದು, ವಿಜಯೇಂದ್ರ ಹಾಗೂ ಆರ್.ಅಶೋಕ್‌ಗೆ ಅಗ್ನಿ ಪರೀಕ್ಷೆ ಎದುರಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಯಾರೇನೇ ಟೀಕೆ-ಟಿಪ್ಪಣಿ ಮಾಡಿದರೂ ‘ಆಶೀರ್ವಾದ’ ಎನ್ನುತ್ತಾ ವಿಜಯೇಂದ್ರ ಮುಂದಡಿಯಿಟ್ಟರೆ, ರಾಜಿ ಸಂಧಾನದ ಪರ್ಯಾಯ ಮಾರ್ಗಗಳನ್ನು ಆರ್.ಅಶೋಕ್ ಹುಡುಕುತ್ತಿದ್ದಾರೆ.