

ಬಿಜೆಪಿ ಹೋರಾಟಕ್ಕೆ ಸಚಿವ ರಾಮಲಿಂಗಾರೆಡ್ಡಿ ತೀಕ್ಷ್ಣ ಪ್ರತಿಕ್ರಿಯೆ
ಬೆಂಗಳೂರು: ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಬಿಜೆಪಿಯವರು ಪ್ರತಿಭಟನೆ ಹಮ್ಮಿಕೊಂಡ ವಿಚಾರಕ್ಕೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿಯವರು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಜನರನ್ನು ಅಭಿವೃದ್ಧಿಯನ್ನು ಮರೆತಿದ್ದರು, ಈಗ ಜನರನ್ನು ತಲುಪುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಕೇಂದ್ರ ಸರ್ಕಾರದಲ್ಲಿರುವ ಬಿಜೆಪಿ ಡಾಲರ್ ಬೆಲೆ ಕಡಿಮೆಯಾದರೂ ಪೆಟ್ರೋಲ್ ಡೀಸೆಲ್ ಬೆಲೆ ಕಳೆದ 9 ವರ್ಷಗಳಿಂದ ಕಡಿಮೆ ಮಾಡಿಲ್ಲ ಹಾಗೂ ಇದೇ ಬಿಜೆಪಿ ತಾನು ಆಡಳಿತದಲ್ಲಿದ್ದಾಗ 2020ರಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಿದ್ದರು, ಆಗ ಅವರಿಗೆ ಜನರ ತೊಂದರೆ ತಿಳಿಯಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಿಕ್ಕೆ ಬರಲ್ಲ ಎಂದು ಅವರಿಗೆ ತಿಳಿದು ಈ ರೀತಿಯ ಎಲ್ಲ ಕೆಟ್ಟ ಆಡಳಿತ ನಡೆಸಿ ನಮ್ಮ ತಲೆ ಮೇಲೆ ಕಟ್ಟಿದರು ಎಂದು ಆರೋಪಿಸಿದ್ದಾರೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನೋಡಿದರೆ ನಮ್ಮ ರಾಜ್ಯದಲ್ಲೇ ಪ್ರಯಾಣದರ ಕಡಿಮೆ ಇದೆ ಹಾಗೂ ಉತ್ತಮ ಸಾರಿಗೆ ವ್ಯವಸ್ಥೆ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ನಂಬರ್ 1 ಎಂದು ಹೇಳಿಕೊಂಡಿರುವ ಸಚಿವರು ಈಗಲಾದರೂ ಬಿಜೆಪಿಯವರು ಕೇವಲ ಸುಳ್ಳು ಹೇಳಿ ತನ್ನ ಫೇಕ್ ವಾಟ್ಸಪ್ ಸೋಷಿಯಲ್ ಮೀಡಿಯಾ ಯೂನಿವರ್ಸಿಟಿಯಿಂದ ಜನರ ದಾರಿ ತಪ್ಪಿಸುವುದನ್ನು ಬಿಡಬೇಕು ಎಂದು ಸಲಹೆ ನೀಡಿದ್ದಾರೆ.
1. ಡಾಲರ್ ಬೆಲೆ ಕಡಿಮೆಯಾದರೂ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಲಿಲ್ಲ ಆಗ ಜನರ ಕಷ್ಟ ಬಿಜೆಪಿಯವರಿಗೆ ತಿಳಿಯಲಿಲ್ಲವೇ?
2. ಬಡಜನರ ಗ್ಯಾಸ್ ಸಬ್ಸಿಡಿಯನ್ನು ನಿಲ್ಲಿಸಿದರು ಆಗ ಬಿಜೆಪಿ ಅವರಿಗೆ ಜನರ ಕಷ್ಟ ತಿಳಿಯಲಿಲ್ಲವೆ?
3. ಅಧಿಕಾರದಲ್ಲಿದ್ದಾಗ ಒಳ್ಳೆ ಆಡಳಿತ ನೀಡಿ ನಾಲ್ಕೂ ನಿಗಮಗಳನ್ನು ಅಭಿವೃದ್ಧಿ ಮಾಡಲು ಪ್ರಯತ್ನಿಸಿದ್ದರೆ ಈ ತೊಂದರೆ ನಮಗೆ ಬರುತ್ತಿರಲಿಲ್ಲ ಅಲ್ಲವೇ?
4. ಸಮಯಕ್ಕೆ ತಕ್ಕನಾಗಿ ಬಸ್ ಖರೀದಿ ವೇತನ ಪರಿಷ್ಕರಣೆ ನೇಮಕಾತಿ ಎಲ್ಲವನ್ನು ಮಾಡಿದ್ದರೆ ಇವಾಗ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ?
5. ಬಿಜೆಪಿಯವರು ಮಾಡಿರುವ ಆಡಳಿತ ಲೋಪದಿಂದ ಈಗ ನಮ್ಮ ತಲೆ ಮೇಲೆ 5900 ಕೋಟಿ ಸಾಲ ಇಟ್ಟು ಹೋಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುತ್ತಾರಾ?