

ಬೆಂಗಳೂರು: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ, ಗಲಭೆ ಸೃಷ್ಟಿಸಿದ ಆರೋಪಿಗಳ ಮೇಲೆ ಹೂಡಿದ್ದ ಕ್ರಿಮಿನಲ್ ದಾವೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದರ ವಿರುದ್ಧ ಪ್ರತಿಪಕ್ಷ ಬಿಜೆಪಿ ರೊಚ್ಚಿಗೆದ್ದಿದ್ದು, ಪ್ರತಿಭಟನೆಯ ಕಿಚ್ಚು ರಾಜಧಾನಿಗೂ ಹರಡಿದೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದ ರಾಜ್ಯ ಬಿಜೆಪಿ ನಾಯಕರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಮೊಳಗಿಸಿ ಕಿಡಿಗೇಡಿ ಮತಾಂಧರ ಬೆಂಬಲಕ್ಕೆ ನಿಂತ ಲಜ್ಜೆಗೇಡು ಸರ್ಕಾರ ಎಂದು ಕಿಡಿಕಾರಿದರು.
ರಾಜ್ಯದ್ದು ಹಿಂದುಗಳ ವಿರೋಧಿ ಸರ್ಕಾರ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ದುಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಒಂದು ಸಾಂಕೇತಿಕ ಪ್ರತಿಭಟನೆ ಇದು. ಹುಬ್ಬಳ್ಳಿಯಲ್ಲಿ 2022ರಲ್ಲಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ, ದಾಳಿ ಮಾಡಿದ್ದ, ಗಲಭೆ ಸೃಷ್ಟಿಸಿದ್ದ ದೇಶದ್ರೋಹಿಗಳ ಮೇಲಿನ ಕೇಸುಗಳನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಹಿಂದಕ್ಕೆ ಪಡೆದಿದೆ ಎಂದು ಟೀಕಿಸಿದರು.
ಹುಬ್ಬಳ್ಳಿ ಘಟನೆ ವಿಷಯದಲ್ಲಿ ಎನ್‍ಐಎ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ಕುರ್ಚಿ ಅಲ್ಲಾಡುತ್ತಿದೆ ಎಂದು ಯಾವ ಮಟ್ಟಕ್ಕೆ ಹೋಗಲು ಕೂಡ ಕಾಂಗ್ರೆಸ್ ಸರ್ಕಾರ ಹೇಸುವುದಿಲ್ಲ ಎಂದು ದೂರಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಶ್ಚಿತ. ಸಿದ್ದರಾಮಯ್ಯನವರು, ವಿಜಯೇಂದ್ರ ಭವಿಷ್ಯ ಹೇಳುತ್ತಾರಾ ಎಂದು ಪ್ರಶ್ನಿಸಿದ್ದನ್ನು ನೆನಪಿಸಿದರು. ಸಿದ್ದರಾಮಯ್ಯನವರು ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರು 5 ವರ್ಷ ಮುಖ್ಯಮಂತ್ರಿ ಎಂದು ನಿಮ್ಮ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಂದ ಹೇಳಿಸಿ ನೋಡೋಣ ಎಂದು ಸವಾಲು ಹಾಕಿದರು.
ಖರ್ಗೆಯವರು ಇಂಥ ಹೇಳಿಕೆ ಕೊಡುತ್ತಿಲ್ಲ. ರಾಜ್ಯ ರಾಜಕಾರಣದ ಕುರಿತು ಮಾತನಾಡದೇ ಅವರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ. ನಮ್ಮ ಪಕ್ಷದ ಹೋರಾಟದ ಬಳಿಕ ಮುಡಾ ಹಗರಣದಲ್ಲಿ ಕದ್ದ ಮಾಲನ್ನು ವಾಪಸ್ ಕೊಡಲು ಸಿದ್ದರಾಮಯ್ಯನವರು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಗಳ ಪಾಪದ ಕೊಡ ತುಂಬಿದೆ. ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಸೂರ್ಯ ಚಂದ್ರರು ಇರುವಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದೆ. ಇದರ ಬಗ್ಗೆ ಜನರು ಚರ್ಚಿಸುತ್ತಿದ್ದಾರೆ. ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಕುಟುಂಬವೇ ಲೂಟಿ ಮಾಡಿದೆ ಎಂದು ಆರೋಪಿಸಿದರು.
ಎಸ್‍ಇಪಿ, ಟಿಎಸ್‍ಪಿ ಹಣ ದುರುಪಯೋಗದ ಕುರಿತು ಜನರು ಚರ್ಚೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಯೇ ಇಲ್ಲವಾಗಿದೆ. ಇಂಥ ಸರಕಾರದಲ್ಲಿ ಶಾಸಕರಾಗಿರುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದೇ ಒಳಿತೆಂದು ಕಾಂಗ್ರೆಸ್ ಶಾಸಕ ರಾಜು ಕಾಗೆಯವರು ಹೇಳಿದ್ದಾಗಿ ಗಮನ ಸೆಳೆದರು.
ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸ ನಿಂತು ಹೋಗಿದೆ ಎಂದು ಬಸವರಾಜರಾಯರೆಡ್ಡಿ ಹೇಳಿದ್ದಾರೆ. ಅಭಿವೃದ್ಧಿ ಕೆಲಸ ಸ್ಥಗಿತವಾಗಿದೆ ಎಂದು ಆರ್.ವಿ.ದೇಶಪಾಂಡೆ ಸೇರಿ ಕಾಂಗ್ರೆಸ್ ಮುಖಂಡರೇ ಹೇಳುತ್ತಿದ್ದಾರೆ ಎಂದು ವಿವರಿಸಿದರು.
ಇನ್ನೊಂದೆಡೆ ದೇಶದ್ರೋಹಿಗಳ ಕೇಸು ಹಿಂಪಡೆಯುವ ದುಸ್ಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿದೆ. ಕಾಂಗ್ರೆಸ್ ಯೋಗ್ಯತೆ ಹರಿಯಾಣ, ಜಮ್ಮು- ಕಾಶ್ಮೀರದ ಚುನಾವಣೆಯಲ್ಲಿ ಗೊತ್ತಾಗಿದೆ. ಅಲ್ಪಸಂಖ್ಯಾತರ ಪಕ್ಷ ಇದ್ದಾಗ ಅಲ್ಪಸಂಖ್ಯಾತರಿಗೆ ಅದುವೇ ಮೊದಲ ಆಯ್ಕೆ. ಅವರಿಲ್ಲದೆ ಇದ್ದಲ್ಲಿ ಕಾಂಗ್ರೆಸ್ ಕಡೆ ನೋಡುತ್ತಾರೆ. ಇಷ್ಟಾದರೂ ಕಾಂಗ್ರೆಸ್ ಪಕ್ಷದವರಿಗೆ ಬುದ್ಧಿ ಬಂದಿಲ್ಲ. ಮುಂದಿನ ದಿನಗಳಲ್ಲಿ ಜನಾಂದೋಲನ, ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಸಿ.ಎನ್. ಅಶ್ವತ್ಥನಾರಾಯಣ್, ಶಾಸಕ ವಿಶ್ವನಾಥ್, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಸಿ.ಟಿ.ರವಿ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಈಗ ಬಿಗ್ ಬಾಸ್ ಸೀರಿಯಲ್ ನಡೆಯುತ್ತಿದೆ. ಕಾಂಗ್ರೆಸ್ ಸರಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್. ಅವರ ಸೂಚನೆಯಂತೆ ಸರಕಾರ ನಡೆದುಕೊಳ್ಳುತ್ತಿದೆ - ಆರ್. ಅಶೋಕ್, ವಿಧಾನಸಭೆ ವಿರೋಧ ಪಕ್ಷದ ನಾಯಕ. ಮುಖ್ಯಮಂತ್ರಿಗಳು ಮನುವಾದ ಪಾಲಿಸುವವರು. ಹಿಂದುಗಳು ತಾವು ಹಿಂದೂ ಎಂದ ತಕ್ಷಣ ನಿಮಗ್ಯಾಕೆ ಬೆಂಕಿ ಬೀಳುತ್ತದೆ? ಇದಕ್ಕೆ ಉತ್ತರ ಕೊಡಲು ನಿಮಗೆ ಸಾಧ್ಯವೇ ? ಅಮಾಯಕ ಪೊಲೀಸರ ಮೇಲೆ ಕಲ್ಲು ತೂರಿ ಗಾಯ ಮಾಡಿ ಆಸ್ಪತ್ರೆಗೆ ಕಳಿಸಿದವರ ಕೇಸು ಹಿಂದಕ್ಕೆ ಪಡೆಯುತ್ತಿದ್ದೀರಿ. ಅವರು ದೇಶಪ್ರೇಮಿಗಳೇ? - ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ನಾಯಕ.
ಹುಬ್ಬಳ್ಳಿಯಲ್ಲಿ ದೇಶದ್ರೋಹಿಗಳ ಕೇಸನ್ನು ವಾಪಸ್ ಪಡೆದ ಸಿದ್ದರಾಮಯ್ಯನವರು ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯನವರ ಸಚಿವಸಂಪುಟದ ಎಲ್ಲ ಸಹೋದ್ಯೋಗಿಗಳೂ ಭಯೋತ್ಪಾದಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದು, ಇದು ಖಂಡನೀಯ -ಗೋವಿಂದ ಕಾರಜೋಳ, ಸಂಸದ.