ಕೇಂದ್ರದ ಜನಗಣತಿಗೆ ಸಹಕರಿಸಲು ಬಿಜೆಪಿ ಒತ್ತಡ | New survey opposed

BJP
Published on

ಬೆಂಗಳೂರು: ಕಾಂತರಾಜು ವರದಿ ಕೈಬಿಟ್ಟ ರಾಜ್ಯ ಸರ್ಕಾರ, ಹೊಸದಾಗಿ ಜಾತಿ ಜನಗಣತಿ ಸಮೀಕ್ಷೆ ಮುಂದಾಗಿರುವುದಕ್ಕೆ ಬಿಜೆಪಿ ಆಕ್ಷೇಪಿಸಿದ್ದು, ಹೋರಾಟದ ತಂತ್ರಗಾರಿಕೆ ರೂಪಿಸಲು ಮುಂದಾಗಿದೆ.

ಇತರೆ ಹಿಂದುಳಿದ ವರ್ಗಗಳ ಪ್ರಮುಖರು, ಪಕ್ಷದ ಒಬಿಸಿ ಮೋರ್ಚಾ ನಾಯಕರು ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ಸಭೆ ಸೇರಿ, ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಿದ್ದಾರೆ.

ಹೊಸದಾಗಿ ಸಮೀಕ್ಷೆ ನಿರ್ಧಾರದಿಂದ ಹಿಂದೆ ಸರಿದು, ಕೇಂದ್ರ ಸರ್ಕಾರ ನಡೆಸಲು ಉದ್ದೇಶಿತ ಜನಗಣತಿ, ಜಾತಿ ಗಣತಿಗೆ ಸಹರಿಸಬೇಕು ಎಂಬ ಒಂದಂಶದ ಕಾರ್ಯಸೂಚಿ ಮೇಲೆ ಹೋರಾಟಕ್ಕೆ ಇಳಿದು, ಹಿಂದುಳಿದ ವರ್ಗಗಳಲ್ಲಿ ಜಾಗೃತಿ ಮೂಡಿಸಲು ಚಿಂತನೆ ನಡೆಸಿದೆ.

ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವುದಾಗಿ ಭರವಸೆಯಿತ್ತು, ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದ ಕಡೆಗೆ ಬೊಟ್ಟು ತೋರಿಸಿದರು. ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಅಧಿಕಾರ ನೀಡಿ ವರ್ಷ ಸಮೀಪಿಸುತ್ತಿದ್ದರೂ ದತ್ತಾಂಶ ಸಂಗ್ರಹ ಹೆಸರಿನಲ್ಲಿ ಮೀಸಲು ವರ್ಗೀಕರಣ ಮುಂದೂಡುತ್ತಿದೆ.

ಒಬಿಸಿಗೆ ವಂಚನೆ

ಎಚ್.ಕಾಂತರಾಜು ವರದಿಯನ್ನು ಮುಂದಿಟ್ಟುಕೊಂಡು ಹಿಂದುಳಿದ ವರ್ಗಗಳಿಗೆ ವಂಚಿಸಿತು. ಈ ಸಮೀಕ್ಷೆ ದಶಕದ ಹಿಂದಿನದು, ಅವೈಜ್ಞಾನಿಕ, ಕಾನೂನು ರೀತ್ಯ ಮಾನ್ಯವಾಗದು ಎಂದು ಪ್ರತಿಪಕ್ಷ, ಅನೇಕ ಸಮುದಾಯಗಳು ಹೇಳಿದರೂ ಒಪ್ಪಲಿಲ್ಲ.

ವೈಜ್ಞಾನಿಕವಾಗಿ ಸಮೀಕ್ಷೆಯಾಗಿದೆ, ಅಂಕಿ-ಅಂಶಗಳೆಲ್ಲ ಸರಿಯಿವೆ. ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ಅನುಷ್ಠಾನಕ್ಕೆ ತರುತ್ತೇವೆ ಎಂದಿದ್ದ ಸಿಎಂ, ಡಿಸಿಎಂ ದಿಢೀರ್ ಉಲ್ಟಾ ಹೊಡೆಯದು, ಹಿಂದೆ ನಾವು ಹೇಳಿದ್ದನ್ನೇ ಒಪ್ಪಿಕೊಂಡಿದ್ದಾರೆ.

ಹೊಸದಾಗಿ ಸಮೀಕ್ಷೆ ನಡೆಸುವ ತೀರ್ಮಾನದಲ್ಲೂ ಹಿಂದುಳಿದ ವರ್ಗಗಳಿಗೆ ದಾರಿ ತಪ್ಪಿಸುವ ಹುನ್ನಾರ ಹೂಡಿದೆ. ಜಾತಿ ಜನಗಣತಿ ಬಗ್ಗೆ ನೈಜ ಕಾಳಜಿಯಿದ್ದರೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲಿಸಿ ಸಹಕರಿಸಬೇಕು ಎಂದು ಒತ್ತಡ ಹೇರಲು ಬಿಜೆಪಿ ಹಿಂದುಳಿದ ವರ್ಗಗಳ ನಾಯಕರು ಚಿಂತನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net