

ಬೆಂಗಳೂರು: ಕಾಂಗ್ರೆಸ್ ಪಕ್ಷವು ಮತಗಳವು, ಮತದಾರರ ಯಾದಿಯ ಲೋಪ ಮುಂದಿಟ್ಟು ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದರೆ, ಕೇಂದ್ರೀಯ ಚುನಾವಣಾ ಆಯೋಗದ ಸಂಭಾವ್ಯ ಮತದಾರರ ಯಾದಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಕಾರ್ಯಕರ್ತರನ್ನು ಜೋಡಿಸಲು ಪ್ರತಿಪಕ್ಷ ಬಿಜೆಪಿ ಸನ್ನದ್ಧವಾಗಿದೆ.
ಬೆಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಪಕ್ಷದ ಬೂತ್‌ಮಟ್ಟದ ಏಜೆಂಟರು-1 ರಾಜ್ಯಮಟ್ಟದ ಕಾರ್ಯಾಗಾರ ಸೋಮವಾರ ನಡೆಯಿತು. ಪಕ್ಷದ ಕೇಂದ್ರೀಯ ಶಿಸ್ತು ಸಮಿತಿ ಅಧ್ಯಕ್ಷ ಓಂಪಾಠಕ್, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರ ನಾಯಕರು ಮಾತನಾಡಿ ಸಮಗ್ರ ವಿಶೇಷ ಪರಿಷ್ಕರಣೆಯ ಮಹತ್ವವನ್ನು ತಿಳಿಸಿದರು.
ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆಯ ಸ್ವರೂಪ, ಪಕ್ಷದ ಬೂತ್‌ಮಟ್ಟದ ಏಜೆಂಟರು 1, 2 ಪರಸ್ಪರ ಒಂದಾಗಿ ನಿರ್ವಹಿಸಬೇಕಾದ ಕೆಲಸ, ಶುದ್ಧ ಮತ್ತು ಪಾರದರ್ಶಕ ಯಾದಿ ತಯಾರಿಗೆ ಸಹಕಾರ, ಜನರಲ್ಲಿ ಜಾಗೃತಿ ಮತ್ತಿತರ ಹೊಣೆಗಾರಿಕೆ ಮಾಹಿತಿ ಹಂಚಿಕೊಂಡರು.
ಮತಗಳವು ಬಗ್ಗೆ ಪುರಾವೆ, ದಾಖಲೆಗಳಿದ್ದರೆ ಕಾನೂನು ರೀತ್ಯ ಹೋರಾಟ ಮಾಡಲು ಅವಕಾಶವಿದೆ. ಆದರೆ ಪದೇ ಪರಾೃದೆ ಸುಳ್ಳುಗಳನ್ನು ಹೇಳಿ ಸಂವಿಧಾನಬದ್ಧ ಸ್ವಾಯತ್ತ ಸಂಸ್ಥೆ ವಿಶ್ವಾಸಾರ್ಹತೆಗೆ ಧಕ್ಕೆ, ಬಿಜೆಪಿ ಬಗ್ಗೆ ಗೊಂದಲ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸಲು ಕಾಂಗ್ರೆಸ್ ಪಕ್ಷ ಹವಣಿಸಿದೆ ಎಂದು ನಾಯಕರು ಹೇಳಿದರು.
ಕಾಂಗ್ರೆಸ್ ಪಕ್ಷದ ಈ ತಂತ್ರಗಾರಿಕೆಯ ಬಗ್ಗೆ ಪ್ರಜ್ಞಾವಂತ ಮತದಾರರಿಗೆ ಅರಿವಿದೆ. ಆದರೂ ಪಕ್ಷದ ಬೂತ್‌ಮಟ್ಟದ ಇಬ್ಬರು ಏಜೆಂಟರು ವಸ್ತುಸ್ಥಿತಿ ಮನವರಿಕೆ ಮಾಡಿಕೊಡಬೇಕು. ಸಮಗ್ರ ವಿಶೇಷ ಪರಿಷ್ಕರಣೆ ಅವಕಾಶ ಬಳಸಿಕೊಳ್ಳಲು ಮನವಿ ಮಾಡಬೇಕು ಎಂದರು.
ಅಕ್ರಮ, ನಕಲಿ ಮತದಾರರ ಹೆಸರು ಕೈಬಿಟ್ಟು, ಅರ್ಹ ಮತದಾರರನ್ನು ಸೇರಿಸಲು ಇದೊಂದು ಮಹತ್ವದ ಅವಕಾಶವಾಗಿದೆ. ಪ್ರಮುಖ ಕಾರ್ಯದಲ್ಲಿ ಪ್ರತಿಯೊಬ್ಬ ಏಜೆಂಟರು ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದು ಕಾರ್ಯಾಗಾರದಲ್ಲಿ ತಿಳಿಹೇಳಲಾಯಿತು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಸದಸ್ಯೆ ಭಾರತಿಶೆಟ್ಟಿ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿತುರಾಜ್ ಸಿನ್ಹಾ, ಮಾಜಿ ಶಾಸಕರಾದ ಎನ್.ಮಹೇಶ್, ಪಿ.ರಾಜೀವ್ ಮತ್ತಿತರರು ಇದ್ದರು.