

ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆಯ ನೈತಿಕ ಹೊಣೆ ಹೊತ್ತು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಪಟ್ಟು ಮತ್ತಷ್ಟು ಬಿಗಿಗೊಳಿಸಿ, ರಾಜಧಾನಿಯಲ್ಲಿ ಭಿತ್ತಿಪತ್ರ ಅಭಿಯಾನ ಮಂಗಳವಾರ ನಡೆಸಿತು.
ಸಚಿವ ಪ್ರಿಯಾಂಕ್ ಖರ್ಗೆ ಆಪ್ತರಾದ ರಾಜು ಕಪನೂರು ಮತ್ತು ಗ್ಯಾಂಗ್‌ನ ಹೆಸರುಗಳನ್ನು ಮೃತ ಸಚಿನ್ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎಂದು ವಿವರಿಸಿ, ನಾಲ್ವರ ಕೊಲೆಗೆ ಸುಪಾರಿ, ಹನಿಟ್ರ್ಯಾಪ್ ಮತ್ತಿತರ ಆತಂಕಕಾರಿ ಅಂಶಗಳಿವೆ.
ಪ್ರಿಯಾಂಕ್ ಖರ್ಗೆಗೆ ಗೂಂಡಾ ಹಿನ್ನೆಲೆಯ ರಾಜು ಕಪನೂರು ಆಪ್ತರಾಗಿದ್ದಾರೆ. ಸಚಿವ ರಕ್ಷಣೆಯಿದೆ ಎಂದು ದುಷ್ಕೃತ್ಯ ಎಸಗಿದ್ದಾರೆ. ಮೃತನ ಕುಟುಂಬಕ್ಕೂ ಜೀವಭಯವಿದ್ದು, ಸಿಬಿಐ ತನಿಖೆಗೆ ಮನವಿ ಮಾಡಿಕೊಂಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಿ, ಗುತ್ತಿಗೆದಾರರ ಜೀವ ಹಿಂಡುತ್ತಿರುವ ಸರ್ಕಾರ, ಪ್ರಿಯಾಂಕ್ ಖರ್ಗೆ ದಬ್ಬಾಳಿಕೆಗೆ ಧಿಕ್ಕಾರ ಇತ್ಯಾದಿ ಘೋಷಣೆಗಳು ಭಿತ್ತಿಪತ್ರಗಳಲ್ಲಿದ್ದವು. ಖರ್ಗೆ ದಬ್ಬಾಳಿಕೆಯಿಂದ ಕಲಬುರಗಿ ತತ್ತರಿಸಿದ್ದು, ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ ಎಂದು ದೂರಿದರು.
ಸಚಿವ ಪ್ರಿಯಾಂಕ್ ಖರ್ಗೆ ನಿವಾಸವಿರುವ ರೇಸ್ ಕೋರ್ಸ್ ರಸ್ತೆ, ನಂತರ ಕೆಪಿಸಿಸಿ ಕಚೇರಿ ಎದುರು ಈ ಪೋಸ್ಟರ್‌ಗಳನ್ನು ಅಂಟಿಸಿ ಪ್ರಿಯಾಂಕ್ ಖರ್ಗೆ ರಾಜೀನಾಮೆ, ಸಿಬಿಐ ತನಿಖೆ, ನೊಂದ ಕುಟುಂಬಕ್ಕೆ ನ್ಯಾಯ ಸಿಗುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೋಸ್ಟರ್ ಅಭಿಯಾನ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಪೊಲೀಸರು ಮನವೊಲಿಸಿ ಹಿಂತೆಗೆಸಲು ಪ್ರಯತ್ನಿಸಿದರು. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಅವರು ಪೋಸ್ಟರ್ ಅಂಟಿಸಿದ್ದರು, ಈಗ ನಾವು ಅಂಟಿಸುತ್ತಿದ್ದೇವೆ ತಪ್ಪೇನು ? ಎಂದು ಮುಖಂಡರು ಕೇಳಿದರು.
ಪ್ರತಿಭಟನಾನಿರತ ಮುಖಂಡರನ್ನು ಬಂಧಿಸಿದ ಕರೆದೊಯ್ದ ಪೊಲೀಸರು ನಂತರ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಸಿ.ಟಿ.ರವಿ, ಮುಖಂಡರಾದ ಜಗದೀಶ್ ಹಿರೇಮನಿ, ಉಮೇಶ್ ಶೆಟ್ಟಿ, ಕರುಣಾಕರ್ ಖಾಸಲೆ, ಪ್ರಶಾಂತ ಕೆಡೆಂಜಿ, ಕಾರ್ಯಕರ್ತರು ಭಾಗವಹಿಸಿದ್ದರು.