

| ಮೃತ್ಯುಂಜಯ ಕಪಗಲ್ ಬೆಂಗಳೂರು
ಮುಂಬರುವ ವಿಧಾನಸಭೆ ಚುನಾವಣೆಗೆ ನಿಗದಿತ ಗುರಿ ಸಾಧಿಸುವ ನಿಟ್ಟಿನಲ್ಲಿ ವರ್ಚಸ್ಸು ವೃದ್ಧಿ, ಸಂಘಟನೆ ಬಲವರ್ಧನೆ ಜತೆಗೆ ಒನ್ ಪ್ಲಸ್ ಒನ್ ಪ್ಲಾ್ಯನ್ ಕಾರ್ಯತಂತ್ರವನ್ನು ಆಡಳಿತರೂಢ ಬಿಜೆಪಿ ಹೆಣೆದಿದೆ. ಪ್ರತಿನಿಧಿಸುವ ಕ್ಷೇತ್ರದ ಜನರ ಅಚಲ ವಿಶ್ವಾಸ ಸಂಪಾದಿಸಿ, ಬಿಗಿ ಹಿಡಿತ ಹೊಂದಿರುವ ಹಿರಿಯ ಸಚಿವರು, ಶಾಸಕರು ತಾವು ಗೆದ್ದು, ಮತ್ತೊಂದು ಸ್ಥಾನ ಗೆಲ್ಲಿಸಿಕೊಂಡು ಬರುವುದು ‘ಒನ್ ಪ್ಲಸ್ ಒನ್ ಪ್ಲ್ಯಾನ್’ ತಿರುಳು. ಕೇಂದ್ರ, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಸಂಘಟನಾ ಬಲ, ಪ್ರಧಾನಿ ನರೇಂದ್ರ ಮೋದಿ ಜತೆಗೆ ವೈಯಕ್ತಿಕ ವರ್ಚಸ್ಸು ಬಳಸಿಕೊಂಡರೆ ಒಂದು ಹೆಚ್ಚುವರಿ ಸ್ಥಾನದ ಗೆಲುವು ಸುಲಭ ಸಾಧ್ಯ ಎನ್ನುವುದು ಪಕ್ಷದ ನಾಯಕರ ಲೆಕ್ಕಾಚಾರ.
‘ಸಂತೋಷ’ದ ಸಮಯ: ಬಿಜೆಪಿ ಚಿಂತನ ಸಭೆಯಲ್ಲಿ ಪರೋಕ್ಷವಾಗಿ ಈ ವಿಷಯ ಪ್ರಸ್ತಾಪವಾಗುವಂತೆ ನೋಡಿಕೊಂಡು ಉದ್ದೇಶಿತ ಕಾರ್ಯತಂತ್ರಕ್ಕೆ ಸ್ಪಷ್ಟತೆ ಸಿಕ್ಕಿದ್ದಕ್ಕಾಗಿ ಹಿರಿಯರು ಸಂತೋಷ ಭರಿತರಾಗಿದ್ದಾರೆ. ಗೆದ್ದೇ ಗೆಲ್ಲುವ ಖಾತರಿಯುಳ್ಳವರು ಇನ್ನೊಂದು ಹೆಚ್ಚುವರಿ ಕ್ಷೇತ್ರದ ಜವಾಬ್ದಾರಿ ಹೊತ್ತುಕೊಂಡು ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲು ನೆರವಾಗಬಹುದು ಎಂದು ಸಚಿವ ಮುನಿರತ್ನ ಸಲಹೆ ನೀಡಿದ್ದಾರೆ. ‘ಒಂದೇ ಕ್ಷೇತ್ರದಲ್ಲಿ ಮೂರ್ನಾಲ್ಕು ಬಾರಿ ಗೆದ್ದವರು ಬೇರೆ ಕ್ಷೇತ್ರಕ್ಕೆ ಹೋಗಿ ಸ್ಪರ್ಧಿಸಿ, ತಮ್ಮ ಪ್ರಭಾವ ಬಳಸಿ ಪಕ್ಷದ ಮೂರ್ನಾಲ್ಕು ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬಹುದು’ ಎಂಬ ಅಭಿಪ್ರಾಯವನ್ನು ಸುರಪುರ ಶಾಸಕ ರಾಜುಗೌಡ (ರಾಜಾ ನರಸಿಂಹನಾಯಕ) ವ್ಯಕ್ತಪಡಿಸಿದ್ದಾರೆ.
ಮುನಿರತ್ನ ಮತ್ತು ರಾಜುಗೌಡರ ಈ ಪ್ರಸ್ತಾಪಕ್ಕೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಒಳ್ಳೆಯ ಸಲಹೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು ಒನ್ ಪ್ಲಸ್ ಒನ್ ಪ್ಲಸ್ ಪ್ಲಾ್ಯನ್ಗೆ ಪ್ರೇರಣೆ ನೀಡಿತು ಎಂದು ಮೂಲಗಳು ತಿಳಿಸಿವೆ. ಕೆಲವು ಹಿರಿಯ ಸಚಿವರು ಹಾಗೂ ಶಾಸಕರು ‘ಸುರಕ್ಷಿತ ವಲಯ’ದಿಂದ ಹೊರಬಂದು ಪಕ್ಷ ಹಾಗೂ ಗೆಲುವಿಗಾಗಿ ದುಡಿದ ಕಾರ್ಯಕರ್ತರಿಗೆ ನೆರವಾಗಿ ಹೊಸ ನಾಯಕತ್ವ ಬೆಳೆಸಲು ಸಹಕರಿಸಬೇಕು ಎಂಬ ಕಿವಿಮಾತು ಹೇಳಿದರು ಎನ್ನಲಾಗಿದೆ. ಆ ಮೂಲಕ ಒನ್ ಪ್ಲಸ್ ಒನ್ ಪ್ಲಾ್ಯನ್ ಅನುಷ್ಠಾನದ ಜವಾಬ್ದಾರಿಯನ್ನು ಸಂಸದ, ಸಚಿವ, ಶಾಸಕರ ಹೆಗಲೇರಿಸುವ ಸಂದೇಶವನ್ನು ಈ ಸಭೆಯ ಮೂಲಕ ರವಾನಿಸಿದ್ದಾರೆ.
ಹೆಚ್ಚುವರಿ 53 ಸ್ಥಾನಗಳ ಗೆಲುವಿಗೆ ಲಕ್ಷ್ಯ: ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಪಕ್ಷ ಗಳಿಸಿದ ಬಲದೊಂದಿಗೆ ಹಿರಿಯ ಸಚಿವರು ಮತ್ತು ಶಾಸಕರ ಮೂಲಕ ಹೆಚ್ಚುವರಿ 53 ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವತ್ತ ಲಕ್ಷ್ಯ ವಹಿಸಿದೆ. ಮಿಷನ್ 150 ಗುರಿ ಸಾಧಿಸಲು ಹೂಡಿರುವ ತಂತ್ರೋಪಾಯಗಳಲ್ಲಿ ‘ಹೆಚ್ಚುವರಿ ಸ್ಥಾನ’ದ ಗೆಲುವ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಮತ್ತೆ ಗೆಲ್ಲುವ ಸಾಧ್ಯತೆಯಿಲ್ಲದ ಹಾಲಿ ಶಾಸಕರ ಟಿಕೆಟ್ಗೆ ಕತ್ತರಿ ಪ್ರಯೋಗ ಸಲೀಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಕ್ಷ ದುರ್ಬಲವಾಗಿರುವ ಹಳೇ ಮೈಸೂರು ಮತ್ತು ಕಲ್ಯಾಣ ಕರ್ನಾಟಕ ಪ್ರಾಂತಗಳು ಒನ್ ಪ್ಲಸ್ ಒನ್ ಪ್ಲಾ್ಯನ್, ಹಲವು ಬದಲಾವಣೆಗಳಿಗೆ ಗುರಿಯಾಗಲಿವೆ. ಸಚಿವರು, ಪ್ರಬಲ ಶಾಸಕರು ಮತ್ತು ಸಂಸದರು ತಲಾ ಒಂದು ಹೆಚ್ಚುವರಿ ಸ್ಥಾನ ಗೆಲ್ಲಿಸಿದರೆ ಸ್ವಂತ ಬಲದ ಮೇಲೆ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಪಕ್ಷದ ರಾಜ್ಯ ನಾಯಕರಲ್ಲಿದೆ.
ಸ್ವಯಂಪ್ರೇರಿತ ಸಮ್ಮತಿ: ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳ ಜವಾಬ್ದಾರಿಯು ಹಿರಿಯ ಸಚಿವರಾದ ವಿ.ಸೋಮಣ್ಣ ಹಾಗೂ ಆರ್.ಅಶೋಕ್ ಹೆಗಲೇರುವ ಸಾಧ್ಯತೆಯಿದ್ದು, ಚಿಂತನ ಸಭೆ ಈ ಕುರಿತು ಸುಳಿವು ನೀಡಿದೆ ಎಂದು ಮೂಲಗಳು ಹೇಳಿವೆ. ಸಂತೋಷ್ ಗಮನಸೆಳೆದ ಪ್ರಸ್ತಾಪಕ್ಕೆ ಕೆಲವರು ಸ್ವಯಂ ಪ್ರೇರಿತವಾಗಿ ಹೊಣೆ ಹೊತ್ತಿದ್ದು, ಬೇಕಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದನ್ನು ಉಳಿದವರ ವಿವೇಚನೆಗೆ ಬಿಡಲಾಗಿದೆ. ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ (ಮಾಗಡಿ) ಮುನಿರತ್ನ (ಗಾಂಧಿನಗರ), ಮಾಜಿ ಸಚಿವ ಅರವಿಂದ ಲಿಂಬಾವಳಿ (ಕೆಜಿಎಫ್) ಹೆಚ್ಚುವರಿ ಕ್ಷೇತ್ರವನ್ನು ಒಪ್ಪಿಕೊಂಡಿದ್ದಾರೆ. ಪ್ರಭಾವಿ, ಹಿರಿಯ ಸಚಿವ-ಶಾಸಕರಿಗೆ ಆದಷ್ಟು ಬೇಗ ಹೆಸರು ಸೂಚಿಸುವಂತೆ ತಿಳಿಸಿದ್ದು, ಅಂತಿಮ ಪಟ್ಟಿ ತಯಾರಾದ ತಕ್ಷಣ ಒನ್ ಪ್ಲಸ್ ಒನ್ ಪ್ಲಾ್ಯನ್ ಜಾರಿಗೆ ವೇದಿಕೆ ಸಜ್ಜಾಗಲಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರು: ರಾಜ್ಯದ ಎಲ್ಲ ಕಡೆ ಪ್ರವಾಸ ಆರಂಭ ಮಾಡುತ್ತೇನೆ. ಈ ಬಾರಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಸಂಕಲ್ಪ ಹೊಂದಿದ್ದೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕೆ.ಆರ್.ಪೇಟೆಯಲ್ಲಿ ಜು.21ಕ್ಕೆ ಬಹಳ ದೊಡ್ಡ ಸಮಾವೇಶ ನಡೆಯುತ್ತಿದೆ. ಆದಾದ ನಂತರ ಪ್ರವಾಸ ಪ್ರಾರಂಭ ಮಾಡುವುದಾಗಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. ಈ ಬಾರಿ ಖಂಡಿತವಾಗಲೂ ಈ ಗುರಿ ತಲುಪುವ ವಿಶ್ವಾಸವಿದೆ. ಮತದಾರರು ನಮ್ಮ ಜತೆಗಿದ್ದಾರೆ. ನಾವೆಲ್ಲರೂ ಸೇರಿ ಮೊನ್ನೆ ಚರ್ಚೆ ಮಾಡಿದ್ದೇವೆ ಎಂದರು. ನಮಗೆ ಜನಬೆಂಬಲ ಇದೆ, ಮೋದಿ ಅವರ ಕಾರ್ಯಕ್ರಮ ದೇಶದ ಜನರ ಮೆಚ್ಚುಗೆ ಪಾತ್ರವಾಗಿದೆ. ಇದೆಲ್ಲದರಿಂದ ಮುಂದಿನ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವು ಸಾಧಿಸಲು ಅನುಕೂಲ ಆಗಲಿದೆ ಎಂದು ಬಿಎಸ್ವೈ ಹೇಳಿದರು.
ಅನ್ಯಪಕ್ಷದವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಈಗಾಗಲೆ ಆಕ್ಷನ್ ಪ್ಲಾ್ಯನ್ ಸಿದ್ಧವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಅವರು ಮಾತನಾಡಿ, ಬಿಜೆಪಿ ಸೇರ್ಪಡೆಯಾಗುವವರಲ್ಲಿ ಶಾಸಕರೇ ಹೆಚ್ಚು ಇದ್ದಾರೆ. ಈಗ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆಗುವುದಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಅವರನ್ನು ಸೇರಿಸಿಕೊಳ್ಳುತ್ತೇವೆ ಎಂದರು. ಈ ಬಾರಿ ಖಂಡಿತವಾಗಿಯೂ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಒಳ್ಳೆಯ ಫೈಟ್ ಅಂತೂ ಆಗಲಿದೆ. ಕಾಂಗ್ರೆಸ್ ನಾಯಕ ಡಾ.ಜಿ. ಪರಮೇಶ್ವರ್ ಬಿಜೆಪಿ ಸೇರುತ್ತಾರೆಯೆ ಎಂಬ ಪ್ರಶ್ನೆಗೆ, ನಾನು ತುಮಕೂರು ಭಾಗದ ಕಾಂಗ್ರೆಸ್ ನಾಯಕರ ಜತೆ ಮಾತನಾಡಿಲ್ಲ ಎಂದರು.
ಕ್ಷೇತ್ರ ಬದಲಾವಣೆ ವಿಚಾರ ಕುರಿತು ಯಾವುದೇ ಚರ್ಚೆ ಆಗಿಲ್ಲ. ಯಾವುದೇ ಧರ್ಮ, ಜಾತಿಯವರಿಗೆ ಸಿಎಂ ಸ್ಥಾನ ಮೀಸಲಿಲ್ಲ. ಪಕ್ಷದ ಬೆಂಬಲ ಇದ್ದರೆ ಆಗುತ್ತದೆ. ಪ್ರಯತ್ನ ಮಾಡುವುದು ತಪ್ಪಲ್ಲ. ಅದೃಷ್ಟ ಬಂದಾಗ ಆಗುತ್ತದೆ. ಕಾಯಬೇಕು ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯಪಾಲರ ತೀರ್ಮಾನಕ್ಕೆ ಬದ್ಧ: ಮೃತ ಗುತ್ತಿಗೆದಾರ ಸಂತೋಷ ಪಾಟೀಲ್ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಬಗ್ಗೆ ರಾಜ್ಯಪಾಲರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಸಂತೋಷ ಪಾಟೀಲ್ ಪತ್ನಿಯಿಂದ ರಾಜ್ಯಪಾಲರಿಗೆ ದೂರು ನೀಡಿರುವ ವಿಷಯದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ಗರಂ ಆಗಿ ಪ್ರತಿಕ್ರಿಯಿಸಿದ ಕೆಎಸ್ಇ, ತನಿಖೆ ನಡೆಯುವ ಸಂದರ್ಭದಲ್ಲಿ ಏನು ಬೇಕಾದರೂ ಮಾಡುವ ಅಧಿಕಾರವಿದೆ, ಮಾಡಲಿ ಎಂದರು. ನಿಮಗೆ ತನಿಖೆ ಮಾಡಿಲ್ಲ ಅಂತ ಯಾರು ಹೇಳಿದ್ರು? ನನ್ನನ್ನು ತನಿಖೆಗೆ ಕರೆದಿಲ್ಲ ಅಂತ ನಿಮಗೆ ಗೊತ್ತಾ ಎಂದು ಪ್ರಶ್ನಿಸಿದ ಅವರು, ಬೇರೆಯವರ ಆರೋಪಗಳಿಗೆ ಉತ್ತರ ಕೊಡೋದಿಲ್ಲ ಎಂದರು.