ರಾಹುಲ್ ಹೇಳಿಕೆಗೆ ಬಿಜೆಪಿ ಆಕ್ಷೇಪ; ಭಗವಾನ್ ಶ್ರೀರಾಮ ಪೌರಾಣಿಕ ವ್ಯಕ್ತಿ ಎಂದ ಲೋಕಸಭೆ ವಿಪಕ್ಷ ನಾಯಕ

Rahul Gandhi
Published on

ನವದೆಹಲಿ: ಭಗವಾನ್ ಶ್ರೀರಾಮನನ್ನು ಪೌರಾಣಿಕ ವ್ಯಕ್ತಿ ಎನ್ನುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ವಿವಾದಕ್ಕೀಡಾಗಿದ್ದಾರೆ. ರಾಹುಲ್ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಕಾಂಗ್ರೆಸ್ಸನ್ನು ‘ರಾಮದ್ರೋಹಿ, ರಾಮ ವಿರೋಧಿ, ಅದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣಕ್ಕೂ ವಿರೋಧ ವ್ಯಕ್ತಪಡಿಸಿತ್ತು’ ಎಂದು ಕಿಡಿಕಾರಿದೆ.

ಅಮೆರಿಕದ ಬ್ರೌನ್ ಯೂನಿವರ್ಸಿಟಿಯ ವಾಟ್ಸನ್ ಇನ್​ಸ್ಟಿಟ್ಯೂಟ್ ಫಾರ್ ಇಂಟರ್​ನ್ಯಾಷನಲ್ ಆಂಡ್ ಪಬ್ಲಿಕ್ ಅಫೇರ್ಸ್​ನಲ್ಲಿ ನಡೆದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು. ಭಾರತದ ಮಹಾನ್ ಸಾಮಾಜಿಕ ಸುಧಾರಕರು, ರಾಜಕೀಯ ಚಿಂತಕರಾದ ಬುದ್ಧ, ಗುರು ನಾನಕ್, ಬಸವಣ್ಣ, ನಾರಾಯಣಗುರು, ಮಹಾತ್ಮ ಗಾಂಧಿ ಮತ್ತು ಬಿ.ಆರ್.ಅಂಬೇಡ್ಕರ್ ಅವರಲ್ಲಿ ಒಂದು ಸಾಮಾನ್ಯ ಗುಣವಿತ್ತು, ಅವರ್ಯಾರೂ ಧರ್ವಂಧರಾಗಿರಲಿಲ್ಲ.

ಅವರು ಜನರನ್ನು ಪ್ರತ್ಯೇಕಿಸಲು ಬಯಸಲಿಲ್ಲ. ಆದರೆ ಭಗವಾನ್ ರಾಮ ಸೇರಿ ನಮ್ಮ ಎಲ್ಲ ಪೌರಾಣಿಕ ವ್ಯಕ್ತಿಗಳು ಕ್ಷಮಾಶೀಲರಾಗಿದ್ದರು, ಕರುಣಾಮಯಿಗಳಾಗಿದ್ದರು ಎಂದು ಬಿಜೆಪಿ ಹೇಳುವುದನ್ನು ನಾನು ಹಿಂದೂ ಆಲೋಚನೆ ಎಂದೇ ಭಾವಿಸುವುದಿಲ್ಲ. ಹಿಂದೂ ಆಲೋಚನೆ ಇನ್ನೂ ಬಹುತ್ವವಾದಿ, ಇನ್ನೂ ಒಳಗೊಳ್ಳುವ, ಇನ್ನೂ ಪ್ರೀತಿಯಿಂದ ಕೂಡಿದ, ಇನ್ನೂ ಸಹಿಷ್ಣು ಮತ್ತು ಮುಕ್ತವಾಗಿರು ವುದೆಂದು ನಾನು ಭಾವಿಸುತ್ತೇನೆ ಎಂದು ರಾಹುಲ್ ಹೇಳಿದ್ದಾರೆ. ನಾನು ಬಿಜೆಪಿಯ ಕಲ್ಪನೆಯನ್ನು ಹಿಂದು ಕಲ್ಪನೆ ಎಂದು ಭಾವಿಸು ವುದಿಲ್ಲ. ಅವರು ಈಗ ಅಧಿಕಾರದಲ್ಲಿದ್ದು, ಅಪಾರ ಸಂಪತ್ತು- ಶಕ್ತಿ ಹೊಂದಿದ್ದರೂ ಭಾರತೀಯ ಚಿಂತಕರ ದೊಡ್ಡ ಸಮುದಾಯವನ್ನು ಅವರು ಪ್ರತಿನಿಧಿಸುವುದಿಲ್ಲ ಎಂದೂ ರಾಹುಲ್ ಹೇಳಿದ್ದಾರೆ.

ಅವಹೇಳನವೇ ಕಾಂಗ್ರೆಸ್ ಅಸ್ಮಿತೆ

ಭಗವಾನ್ ಶ್ರೀರಾಮನನ್ನು, ಹಿಂದುಗಳನ್ನು ಅವಹೇಳನ ಮಾಡುವುದೇ ಕಾಂಗ್ರೆಸ್ ಅಸ್ಮಿತೆ. ಅವರು ರಾಮನ ಅಸ್ತಿತ್ವವನ್ನು ಅಫಿಡವಿಟ್ ಮೂಲಕ ತಿರಸ್ಕರಿಸಿದವರು, ರಾಮ ಮಂದಿರ ನಿರ್ವಣವನ್ನು ವಿರೋಧಿಸಿದವರು ಹಾಗೂ ಹಿಂದು ಭಯೋತ್ಪಾದನೆ ಎಂಬ ಪದ ರೂಪಿಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಬಂದಿರಲಿಲ್ಲ. ಇದು ಅವರ ಹಿಂದು ವಿರೋಧಿ, ರಾಮವಿರೋಧಿ ಮನಸ್ಥಿತಿಯನ್ನು ತೋರಿ ಸುತ್ತದೆ. ಅಂಥ ರಾಹುಲ್ ಗಾಂಧಿ ರಾಮನನ್ನು ಈಗ ಪೌರಾಣಿಕ ವ್ಯಕ್ತಿ ಎಂದಿದ್ದಾರೆ, ಅವರನ್ನು ಜನ ಕ್ಷಮಿಸಲ್ಲ ಎಂದು ಬಿಜೆಪಿ ವಕ್ತಾರ ಷೆಹಜಾದ್ ಪೂನಾವಾಲಾ ಕಿಡಿಕಾರಿದ್ದಾರೆ.

ಹಿಂದು ಧರ್ಮದಿಂದ ರಾಹುಲ್​ಗೆ ಬಹಿಷ್ಕಾರ

ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮನುಸ್ಮೃತಿ ಕುರಿತು ಮಾತನಾಡುತ್ತ ಸನಾತನ ಧರ್ಮಕ್ಕೆ ಅವಮಾನ ಮಾಡಿದ್ದರಿಂದ ಅವರನ್ನು ಹಿಂದು ಧರ್ಮದಿಂದ ಬಹಿಷ್ಕರಿಸಲಾಗಿದೆ ಎಂದು ಬದರಿನಾಥದ ಶಂಕರಾಚಾರ್ಯ ಆಶ್ರಮದ ಜ್ಯೋತಿರ್ಮಠ ಶಂಕಾರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಹೇಳಿದ್ದಾರೆ. ಮನುಸ್ಮೃತಿ ಅತ್ಯಾಚಾರಿಗಳನ್ನು ರಕ್ಷಿಸುತ್ತದೆ ಎಂದು ಅವರು ಸಂಸತ್​ನಲ್ಲಿ ಹೇಳಿದ್ದನ್ನು ಪ್ರಶ್ನಿಸಿ 3 ತಿಂಗಳು ಕಳೆದರೂ ಉತ್ತರ ಬಂದಿಲ್ಲ. ಮನುಸ್ಮೃತಿ ನಮ್ಮ ಧರ್ಮಗ್ರಂಥ, ಅದನ್ನು ಹಿಡಿದು ಆಡಳಿತ ಪಕ್ಷಗಳ ಸದಸ್ಯರತ್ತ ಬೊಟ್ಟು ಮಾಡಿ ನಿಮ್ಮ ಪುಸ್ತಕದಲ್ಲಿ ಅದು ಬರೆಯಲ್ಪಟ್ಟಿದೆ ಎಂದಿದ್ದರು. ಅಂದರೆ ಅವರು ತಮ್ಮನ್ನು ಹಿಂದು ಎಂದು ಪರಿಗಣಿಸುವುದಿಲ್ಲ, ಮನುಸ್ಮೃತಿ ತನ್ನ ಧರ್ಮಗ್ರಂಥ ಎಂದು ಪರಿಗಣಿಸದ ವ್ಯಕ್ತಿ ಹಿಂದುವಾಗಿರಲು ಸಾಧ್ಯವಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.

ಸಿಖ್ ವಿರೋಧಿ ದಂಗೆ ತಪ್ಪು

ನಾನು ಅಲ್ಲಿ ಇಲ್ಲದಿದ್ದಾಗ ಅಂಥ ಹಲವು ತಪು್ಪಗಳಾಗಿವೆ. ಇತಿಹಾಸದಲ್ಲಿ ಕಾಂಗ್ರೆಸ್ ಮಾಡಿದ ಎಲ್ಲ ತಪ್ಪುಗಳ ಜವಾಬ್ದಾರಿ ನಾನೇ ವಹಿಸಿಕೊಳ್ಳುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ದಂಗೆ ಕುರಿತ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net