ಇಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

BJP
Published on

ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ದೆಹಲಿಯಲ್ಲಿ ಇಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿ ಪ್ರಮುಖ ಹಿರಿಯ ನೇತಾರರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಹಲವರು ನೇರವಾಗಿ ಪಾಲ್ಗೊಂಡರೆ, ಕೆಲವರು ವರ್ಚುವಲ್ ಆಗಿ ಭಾಗವಹಿಸಲಿದ್ದಾರೆ. ಮುಂದಿನ ವರ್ಷ ಆರಂಭದಲ್ಲಿ ನಾಲ್ಕು ಬಿಜೆಪಿ ಆಳ್ವಿಕೆಯ ರಾಜ್ಯಗಳು ಸೇರಿ ಒಟ್ಟು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಹಿನ್ನೆಲೆಯಲ್ಲಿ ಈ ಚುನಾವಣೆಗೆ ಕೆಲವೇ ತಿಂಗಳು ಮುಂಚಿತವಾಗಿ ನಡೆಯುತ್ತಿರುವ ಈ ಕಾರ್ಯಕಾರಿಣಿ ಸಭೆ ಹೆಚ್ಚಿನ ಮಹತ್ವ ಪಡೆದು ಕೊಂಡಿದೆ. ಈ ಕಾರ್ಯಕಾರಿಣಿ ಸಭೆಯಲ್ಲಿ ಜೆಪಿ ನಡ್ಡಾ ದಿಕ್ಸೂಚಿ ಭಾಷಣ ಮಾಡಿದರೆ, ಪ್ರಧಾನಿ ಮೋದಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.

ಉಪಸಮರ ಫಲಿತಾಂಶ ಪರಾಮರ್ಶೆ: ದೇಶದ 13 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯ ಫಲಿತಾಂಶದ ಪರಾಮರ್ಶೆ ಕೂಡ ಈ ಕಾರ್ಯಕಾರಿಣಿ ಸಭೆಯಲ್ಲಿ ನಡೆಯಲಿದೆ. ಲೋಕಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ಮಾತ್ರವೇ ಬಿಜೆಪಿಗೆ ಗೆಲುವು ಸಿಕ್ಕಿದೆ. ಇನ್ನೆರಡಲ್ಲಿ ಸೋಲು ಅನುಭವಿಸಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಆಡಳಿತ ಇದ್ದರೂ ಉಪಚುನಾವಣೆಯಲ್ಲಿ ಪಕ್ಷಕ್ಕೆ ವೈಟ್​ವಾಶ್ ಸೋಲು ಸವಾಲಾಗಿ ಪರಿಣಮಿಸಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಬಳಿ ಇದ್ದ ಎರಡು ಕ್ಷೇತ್ರ ಸೇರಿ ನಾಲ್ಕರಲ್ಲೂ ಸೋಲು ಅನುಭವಿಸಿದೆ.

ದೇಶದ ಸವಾಲುಗಳ ಬಗ್ಗೆ ಚರ್ಚೆ

ಬೆಂಗಳೂರು: ದೇಶದ ಮುಂದಿರುವ ಸವಾಲುಗಳು ಸೇರಿ ವಿವಿಧ ಮಹತ್ವದ ವಿಷಯಗಳು ಚರ್ಚೆಯಾಗಲಿವೆ. ರಾಜಕೀಯ ವಿದ್ಯಮಾನ, ಪ್ರಸ್ತುತ ಬೆಳವಣಿಗೆಗಳು, ವಿವಿಧ ರಾಜ್ಯಗಳ ಚುನಾವಣೆ, ಸಂಘಟನಾತ್ಮಕ ಬೆಳವಣಿಗೆ ಕಾರ್ಯಯೋಜನೆ, ಪ್ರಶಿಕ್ಷ ವರ್ಗ ಮತ್ತಿತರ ವಿಷಯಗಳನ್ನು ಈ ಸಭೆ ರ್ಚಚಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿತ್ತು. ಕರೊನಾ ಕಾರಣಕ್ಕೆ ವ್ಯತ್ಯಯವಾಗಿದ್ದು, ನಾಲ್ಕು ತಾಸುಗಳ ಕಾಲ ಕಾರ್ಯಕಾರಿಣಿ ಸಭೆ ನಡೆಯಲಿದೆ. ನಂತರ ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ವಿವಿಧ ಮೋರ್ಚಾ ಬೈಠಕ್ ಆಯೋಜಿಸಲಾಗಿದೆ. ಭಾನುವಾರದ ಸಭೆಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಕೇಂದ್ರ ಸಚಿವರು ಹಾಗೂ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳು ನೇರವಾಗಿ ಭಾಗಿಯಾಗಲಿದ್ದು, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಪ್ರತಿನಿಧಿಸುವ ಆಯಾ ರಾಜ್ಯಗಳ ಸದಸ್ಯರು ವರ್ಚುವಲ್ ವೇದಿಕೆ ಮೂಲಕ ಪಾಲ್ಗೊಳ್ಳುವರು ಎಂದು ಸಿ.ಟಿ.ರವಿ ಹೇಳಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ವರ್ಚುವಲ್ ವೇದಿಕೆ ಕಲ್ಪಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ 14 ಸದಸ್ಯರು ಪಾಲ್ಗೊಳ್ಳುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net