

ಶಿವಮೊಗ್ಗ: ಮೇಕೆದಾಟು, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ಅನುದಾನ, ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ಅನುಮತಿ ಸೇರಿದಂತೆ ಕರ್ನಾಟಕದ ಪರವಾಗಿ ಬಿಜೆಪಿ ಸಂಸದರು ಬಾಯಿ ಬಿಡಬೇಕು. ಇಲ್ಲದಿದ್ದರೆ ರಾಜಿನಾಮೆ ನೀಡಿ ಮರು ಚುನಾವಣೆ ಎದುರಿಸಬೇಕು ಎಂದು ಡಿಸಿಎಂ DK ಶಿವಕುಮಾರ್ ಸವಾಲೆಸೆದರು.
ಲಕ್ಕವಳ್ಳಿಯ ಭದ್ರಾ ಅಣೆಕಟ್ಟು ಬಾಗಿನ ಅರ್ಪಣೆ ಬಳಿಕ ಐಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. "ಬಿಜೆಪಿ ಸಂಸದರು ಒಂದೇ ಒಂದು ದಿನವೂ ಪ್ರಧಾನಿಯವರನ್ನು, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿಲ್ಲ. ಸಚಿವರಾದ ಪ್ರಹ್ಲಾದ್ ಜೋಶಿ, ಸೋಮಣ್ಣ ಅವರು ನಾವು ಮಾತನಾಡಿದ್ದೇವೆ ಎಂದು ಹೇಳಿದರು ಬಿಟ್ಟರೆ, ಮಿಕ್ಕವರದ್ದು ಬರೀ ಬುಟ್ಟಿ ಬೇವಿನ ಸೊಪ್ಪು" ಎಂದು ವ್ಯಂಗ್ಯವಾಡಿದರು.
"ನಾವು ನಿಮ್ಮ ಬಳಿ ಬೇಡುತ್ತಿಲ್ಲ, ಕೊಡಿ ಎಂದು ಕೊರಗುತ್ತಿಲ್ಲ. ನಮ್ಮ ಹಕ್ಕಿನ ಬಗ್ಗೆ ಮಾತನಾಡುತ್ತಿದ್ದೇವೆ. ಬಿಜೆಪಿ ಸಂಸದರು ಎದುರುಗೊಂಡರೆ ಜನರು ಪ್ರಶ್ನೆ ಮಾಡಬೇಕು. ನಮ್ಮ ಪಾಲಿನ ಹಣ ಕೊಡಿಸಿ ಎಂದು ಕೇಳಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೇಳಲು ರಾಜ್ಯದ ಬಿಜೆಪಿ ಸಂಸದರು ಬಾಯನ್ನೇ ಬಿಚ್ಚುತ್ತಿಲ್ಲ. ನಾನು ಎರಡು ಬಾರಿ ಪ್ರಧಾನಿಯವರು ಹಾಗೂ ಹಣಕಾಸು ಸಚಿವರನ್ನು ಭೇಟಿಯಾಗಿದ್ದೇನೆ. ಕೇಂದ್ರ ಜಲಶಕ್ತಿ ಸಚಿವರಲ್ಲಿಯೂ ಮನವಿ ಮಾಡಿದ್ದೇನೆ. ಆದರೆ ಬಿಜೆಪಿಯವರು ಬಾಯಿಯನ್ನೇ ಬಿಡುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
"ದೇವೇಂದ್ರ ಫಡ್ನವಿಸ್ ಅವರೇ ಆಲಮಟ್ಟಿ ಎತ್ತರ ಹೆಚ್ಚಳ ನಿಮ್ಮ ಹಕ್ಕಲ್ಲ, ನಮ್ಮ ಹಕ್ಕು. ಆಲಮಟ್ಟಿ ಎತ್ತರವನ್ನು 524 ಮೀಟರ್ ಗೆ ಎತ್ತರಿಸಲು ಅವಕಾಶ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿರುವುದು ಸರಿಯಲ್ಲ" ಎಂದರು.
"ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ನಮ್ಮ ಸರ್ಕಾರ 11 ಸಾವಿರ ಕೋಟಿಯಷ್ಟು ಹಣವನ್ನು ಖರ್ಚು ಮಾಡಿದೆ. ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಅಲ್ಲಿ ರೂ.5,300 ಕೋಟಿ ನೀಡುತ್ತೇವೆ ಎಂದು ಹೇಳಿದ್ದರು. ಇದನ್ನು ನೋಡಿ ಬಸವರಾಜ ಬೊಮ್ಮಾಯಿ ಅವರು 5,300 ಕೋಟಿ ಬರುತ್ತದೆ. ಅದಕ್ಕೆ ಒಂದಷ್ಟು ಕೆಲಸಗಳನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದರು" ಎಂದು ತಿಳಿಸಿದರು.