ಬಿಜೆಪಿ ಸಂಸತ್​ ಸದಸ್ಯ ಸಾಕ್ಷಿ ಮಹಾರಾಜ್​ಗೆ ಬಂತು ಪಾಕ್​ ಸಂಖ್ಯೆಯಿಂದ ಬೆದರಿಕೆ ಕರೆ

sakshi maharaj
Published on

ಉನ್ನಾವೋ: ಬಿಜೆಪಿಯ ಸಂಸತ್​ ಸದಸ್ಯ ಸಾಕ್ಷಿ ಮಹಾರಾಜ್​ಗೆ ಪಾಕಿಸ್ತಾನದ ಸಂಖ್ಯೆಯಿಂದ ಕರೆ ಬಂದಿದ್ದು, ಬಾಂಬ್​ ಸ್ಫೋಟಿಸಿ ಹತ್ಯೆ ಮಾಡುವುದಾಗಿ ಕರೆ ಮಾಡಿದಾತ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ಸಾಕ್ಷಿ ಮಹಾರಾಜ್​ ಈ ವಿಷಯ ತಿಳಿಸಿದ್ದಾರೆ.

ಸದಾರ್​ ಕೊತ್ವಾಲಿಯ ಠಾಣಾಧಿಕಾರಿ ದಿನೇಶ್​ ಚಂದ್ರ ಮಿಶ್ರಾ ಅವರಿಗೆ ಉನ್ನಾವೋ ಲೋಕಸಭಾ ಕ್ಷೇತ್ರದ ಸದಸ್ಯ ಸಾಕ್ಷಿ ಮಹಾರಾಜ್​, ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಯಿಂದ ಎರಡು ಬೆದರಿಕೆ ಕರೆಗಳು ಬಂದಿದ್ದು, ಎರಡು ಬಾರಿಯೂ ಬಾಂಬ್​ ಇಟ್ಟು ಮನೆ ಸಮೇತ ನಿಮ್ಮನ್ನೂ ಸಾಯಿಸುವುದಾಗಿ ಕರೆ ಮಾಡಿದಾತ ಬೆದರಿಕೆ ಹಾಕಿದ್ದಾಗಿ ಹೇಳಿದ್ದಾರೆ.

ಕಾಶ್ಮೀರವು ಶೀಘ್ರದಲ್ಲೇ ಪಾಕಿಸ್ತಾನದ ಭಾಗವಾಗಲಿದೆ ಎಂದು ಕರೆ ಮಾಡಿದಾತ ಹೇಳಿದ. ಜತೆಗೆ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರೆವೇರಿಸಿದ್ದಕ್ಕಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ತಿಳಿಸಿದ್ದಾರೆ.

ತಾನು ಮತ್ತು ತನ್ನ ಮುಜಾಹಿದ್ದೀನ್​ಗಳು ತಮ್ಮ ಚಲನವಲನದ ಮೇಲೆ ನಿರಂತರವಾಗಿ ಕಣ್ಣಿಟ್ಟಿರುವುದಾಗಿಯೂ ಹೇಳಿದ ಆ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಷಾ, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರನ್ನು ಕೂಡ ಅವಾಚ್ಯವಾಗಿ ನಿಂದಿಸಿದ್ದಾಗಿ ಹೇಳಿದ್ದಾರೆ.

ಸಾಕ್ಷಿ ಮಹಾರಾಜ್​ ಅವರಿಗೆ ಸದ್ಯ ವೈ ದರ್ಜೆಯ ಭದ್ರತೆಯನ್ನು ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮನೆಯ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ, ಈಗ ಅವರಿಗೆ ಪ್ರಾಣ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಕೊಟ್ಟಿರುವ ಭದ್ರತೆಯನ್ನು ಉನ್ನತೀಕರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net