

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಗುರುವಾರ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಆ.23 ರಿಂದಲೇ ಜ್ವರದಿಂದ ಬಳಲುತ್ತಿದ್ದ ಅಶೋಕ ಗಸ್ತಿ ಇತ್ತೀಚೆಗೆ ಕೊವಿಡ್ ಸೋಂಕಿನಿಂದಲೇ ತಾಯಿಯನ್ನ ಕಳೆದುಕೊಂಡಿದ್ದರು. ಸೆ. 2ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಗಸ್ತಿ ದಾಖಲಾಗಿದ್ದರು. ಇಲ್ಲೇ ಚಿಕಿತ್ಸೆ ಪಡೆಯುತ್ತಿದ್ದ 55 ವರ್ಷದ ಅಶೋಕ್ ಗಸ್ತಿ ಶ್ವಾಸಕೋಶದ ತೀವ್ರ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಲ್ಲದೆ ಅವರಿಗೆ ಕೋವಿಡ್ ಸೋಂಕು ಕೂಡ ಬಾಧಿಸುತ್ತಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ರಾತ್ರಿ ಮೃತಪಟ್ಟರು.
ಜುಲೈ 22 ರಂದು ರಾಜ್ಯಸಭಾ ಸದಸ್ಯರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಅಶೋಕ ಗಸ್ತಿ ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಕನಸುಗಳನ್ನ ಹೊತ್ತಿದ್ದರು. ಎಬಿವಿಪಿ, ಆರ್ಎಸ್ಎಸ್ ಸಂಘಟನೆಯ ಮೂಲಕ ಬಿಜೆಪಿ ಕಾರ್ಯಕರ್ತರಾಗಿ ದುಡಿದು ರಾಯಚೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದರು.
‘ಬಳ್ಳಾರಿ-ರಾಯಚೂರು ಲೋಕಸಭಾ ಕ್ಷೇತ್ರ ಬಿಜೆಪಿ ಉಸ್ತುವಾರಿಯಾಗಿದ್ದ ಅಶೋಕ್ ಗಸ್ತಿಗೆ ರಾಜ್ಯಸಭಾ ಸದಸ್ಯ ಸ್ಥಾನ ಒಲಿದು ಬಂದಿತ್ತು. ಆದ್ರೆ ದುರದೃಷ್ಟವಶಾತ್ ಕೋವಿಡ್ ಸೋಂಕಿನಿಂದ ವಿಧಿವಶರಾಗಿರುವುದಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.