ಛಲವಾದಿ ಮೇಲೆ ಹಲ್ಲೆ ಯತ್ನ ಖಂಡಿಸಿ ಬಿಜೆಪಿ ಚಳವಳಿ | Talk fight between BJP-Cong

BJP
Published on

ಬೆಂಗಳೂರು: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ದಿಗ್ಬಂಧನ, ಕಾರಿನ ಮೇಲೆ ಮಸಿ ಬಳಿದ ಘಟನೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ, ಕಲಬುರಗಿ ಚಲೋ ಚಳವಳಿ ಶನಿವಾರ ಹಮ್ಮಿಕೊಂಡಿದೆ.

ದಿನಕ್ಕೊಂದು ವೇಷ, ಗಂಟೆಗೊಂದು ಬಣ್ಣ, ಗಳಿಗೆಗೊಂದು ಸುಳ್ಳು ಹೇಳುವ ರಾಜಕೀಯ ಸದಾರಮೆ ನಾಟಕವೆಂದು ಛಲವಾದಿಯವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ. ಇವರಿಗೆ ಕಾಂಗ್ರೆಸ್ ಪಕ್ಷದ ಶಾಸಕ, ನಾಯಕರು ಸಾಥ್ ನೀಡಿದ್ದಾರೆ.

ದಿಗ್ಬಂಧನ ಹಾಕಿದ್ದು, ಮಸಿ ಅಥವಾ ಇಂಕ್ ಚೆಲ್ಲಿದ್ದು ಸರಿ, ಮೊಟ್ಟೆ-ಕಲ್ಲುಗಳಲ್ಲಿ ಹೊಡೆದಿದ್ದೂ ಸರಿ. ನಮ್ಮ ಉತ್ತರ ಹೀಗೆ ಇರುತ್ತದೆ ಎಂದು ಸಚಿವರು ಹೇಳಿಕೊಂಡಿದ್ದಾರೆ. ಈ ಉದ್ಧಟತನ, ದರ್ಪ, ಸಚಿವರಲ್ಲೇ ಇರಲಿ, ಕೆಲಣಕು ಹೋಗಿದಿರಿ ಎಂದು ಛಲವಾದಿ ಪ್ರತಿಯಾಗಿ ಸವಾಲು ಹಾಕಿದ್ದಾರೆ.

ಸಭಾಪತಿಗೆ ಹಕ್ಕುಚ್ಯುತಿ ದೂರು

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರಿಗೆ ದಿಗ್ಬಂಧನ, ಹಲ್ಲೆಗೆ ಯತ್ನಿಸಿ ಅಪಮಾನಿಸುವ ಜತೆಗೆ ಹಕ್ಕುಚ್ಯುತಿಯಾಗಿದೆ ಎಂದು ಸಭಾಪತಿಗೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರು ಸಲ್ಲಿಸಿದ್ದು, ಸಭಾಪತಿ ಆಪ್ತ ಸಹಾಯಕ ಸ್ವೀಕರಿಸಿದ್ದಾರೆ.

ಇದಕ್ಕೂ ಮುನ್ನ ವಿಧಾನ ಪರಿಷತ್ ಪ್ರತಿಪಕ್ಷ ಬಿಜೆಪಿ ಸದಸ್ಯರಾದ ಕೆ.ಎಸ್.ನವೀನ್, ಪ್ರದೀಪ ಶೆಟ್ಟರ್, ಕೇಶವ ಪ್ರಸಾದ್, ಸುಜಾ ಕುಶಾಲಪ್ಪ, ಹೇಮಲತಾ ನಾಯಕ, ಕಿಶೋರಕುಮಾರ್ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಿಗೆ ಅವಮಾನಿಸಿದ ಘಟನೆ ಮಾತ್ರವಲ್ಲ, ಗೌರವಾನಿತ್ವ ಮೇಲ್ಮನೆ ಸದಸ್ಯರ ಮೇಲೆ ದೌರ್ಜನ್ಯವೂ ನಡೆದಿದೆ ಎಂದು ಆರೋಪಿಸಿದರು.

ದೌರ್ಜನ್ಯ ತಡೆ ಕಾಯ್ದೆಯಡಿ ಸಿಎಂ, ಡಿಸಿಎಂ, ಗೃಹ ಸಚಿವ ಹಾಗೂ ಈ ಘಟನೆಗೆ ಪೂರ್ತಿ ಕುಮ್ಮಕ್ಕು ನೀಡಿದ ಚಿತ್ತಾಪುರ ಶಾಸಕ, ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಹೆಸರಿಸಲು ಸಭಾಪತಿಗೆ ಕೋರಿದ್ದಾರೆ.

ಪರಿಶಿಷ್ಟ ಜಾತಿ ವ್ಯಕ್ತಿಗೆ ಸಾರ್ವಜನಿಕ ಸ್ಥಳದಲ್ಲಿ ಅವಮಾನ, ಕೂಡಿ ಹಾಕುವುದು ಅವರ ಮೇಲೆ ಹಲ್ಲೆಗೆ ಪ್ರಯತ್ನ, ಕೊಲೆ ಬೆದರಿಕೆ, ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸವಾಗಿದೆ. ವಿಪಕ್ಷ ನಾಯಕರಿಗೆ ಮುಕ್ತ ಸ್ವಾತಂತ್ರ್ಯವಿಲ್ಲದ ಗೂಂಡಾ ರಾಜ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಛಲವಾದಿ ನಾರಾಯಣಸ್ವಾಮಿ ಮೇಲೆ ಹಲ್ಲೆ ಯತ್ನ ಖಂಡಿಸಿ ಕಲಬುರಗಿ ಚಲೋ ಚಳವಳಿಯನ್ನು ಬಿಜೆಪಿ ಶನಿವಾರ ಹಮ್ಮಿಕೊಂಡಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಸೀಟು ಭದ್ರಪಡಿಸಿಕೊಳ್ಳುವ ಪ್ರಯತ್ನ

ಕಾಂಗ್ರೆಸ್‌ನಲ್ಲಿದ್ದ ಛಲವಾದಿ ನಾರಾಯಸ್ವಾಮಿ 40 ವರ್ಷಗಳ ಕಾಲ ಮಲ್ಲಿಕಾರ್ಜುನ ಖರ್ಗೆಗೆ ಬಕೆಟ್ ಹಿಡಿದವರು. ಈಗ ತಮ್ಮ ಸೀಟು ಭದ್ರಪಡಿಸಿಕೊಳ್ಳಲು ಅವರಿಗೆ ಬೈಯುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.

ಅವರನ್ನು ನಾಯಿ ಎಂದು ನಾನು ಕರೆಯುವುದಿಲ್ಲ, ಅವರ ಬಗ್ಗೆ ನಮಗೆ ಗೌರವವಿದೆ. ಸಚಿವ ಪ್ರಿಯಾಂಕ್ ಖರ್ಗೆ ನಮ್ಮ ಪಕ್ಷ ೈರ್ ಬ್ರ್ಯಾಂಡ್, ಯಾವುದಕ್ಕೂ ಹೆದರುವುದಿಲ್ಲ. ಮುಂದೆ ಮುಖ್ಯಮಂತ್ರಿಯಾಗುವವರು, ಅದಕ್ಕೆ ಬಿಜೆಪಿಯವರಿಗೆ ಅವರನ್ನು ಕಂಡರೆ ಭಯವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಟೀಕಿಸಿದರು.

ಕಾಂಗ್ರೆಸ್ ಪಕ್ಷದ ನಾಯಕರನ್ನು ಕೇವಲ ಟೀಕೆ ಮಾಡುವುದಕ್ಕೆ ವಿಧಾನ ಪರಿಷತ್‌ನ ಸದಸ್ಯ ಸ್ಥಾನ ಪಡೆದ ಗಿರಾಕಿ. ಈ ಪದ ಬಳಸಬಾರದು. ಆದರೆ ಕಳೆದ ಎರಡು ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಕಾರಣಕ್ಕೆ ಹೇಳಬೇಕಾಗಿದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದರು.

ಅವರಿಗೆ ನಾಯಿ ಎನ್ನುವ ಪದದ ಮೇಲೆ ಸಾಕಷ್ಟು ಒಲವಿದೆ ಅನಿಸುತ್ತದೆ. ಅವರು ಆರ್‌ಎಸ್‌ಎಸ್‌ನ ಬುಲ್ ಡಾಗ್ ಇರಬಹುದು. ಯಾವುದೇ ಪಕ್ಷವಾದರೂ ಎಲ್ಲೆಯನ್ನು ಮೀರಿ ಭಾಷೆಯನ್ನು ಬಳಸಿ ಟೀಕಿಸುವ ಸಂಪ್ರದಾಯ ನಮ್ಮ ರಾಜ್ಯದಲ್ಲಿಲ್ಲವೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net