

Patna: ಬಿಹಾರ ವಿಧಾನಸಭಾ ಚುನಾವಣೆಯ (Bihar Election) ನಿಮಿತ್ತ ಪಾಟ್ನಾದ ಹೋಟೆಲ್ ಮೌರ್ಯದಲ್ಲಿ ಗುರುವಾರ( ಅ 23) ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿರುವ ಮಹಾಘಟಬಂಧನ್ದ ಪತ್ರಿಕಾಗೋಷ್ಠಿಯ ಪೋಸ್ಟರ್ನಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಚಿತ್ರ ಕಾಣೆಯಾಗಿರುವುದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ.
ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಶೆಹಜಾದ್ ಪೂನಾವಾಲ್ಲಾ, ನಿನ್ನೆಯವರೆಗೂ ಬಿಹಾರದಲ್ಲಿ ರಾಹುಲ್ ಗಾಂಧಿಯೇ ಪಕ್ಷದ ನಾಯಕ ಎಂಬ ಘೋಷಣೆಗಳಿದ್ದವು, ಆದರೆ ಈಗ ಎಲ್ಲ ಬದಲಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಗೌರವ ಉಳಿದಿಲ್ಲ, ಈ ಪಕ್ಷಗಳ ಒಕ್ಕೂಟವನ್ನು ನೋಡಿ, ಅವುಗಳಿಗೆ ಯಾವುದೇ ಧ್ಯೇಯವಿಲ್ಲ, ಯಾವುದೇ ದೃಷ್ಟಿಕೋನವಿಲ್ಲ, ಕೇವಲ ಗೊಂದಲ, ವಿಭಜನೆ ಮತ್ತು ಸ್ಥಾನದ ಮಹತ್ವಾಕಾಂಕ್ಷೆ ಮಾತ್ರ. ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ವಿಷಯದಲ್ಲಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ನಾಯಕ ಪ್ರದೀಪ್ ಭಂಡಾರಿ ಮಾತನಾಡಿದ್ದು, ಕಾಂಗ್ರೆಸ್ ಸಂಸದರ ನಾಯಕತ್ವವನ್ನು ಆರ್ಜೆಡಿ ತಿರಸ್ಕರಿಸಿದೆ, ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿರುವ ಮಹಾಘಟಬಂಧನ್ ಪತ್ರಿಕಾಗೋಷ್ಠಿಗೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿಯವರ ಯಾವುದೇ ಪೋಸ್ಟರ್ ಹಾಕಿಲ್ಲ. ತೇಜಸ್ವಿ ಯಾದವ್ ಮತ್ತು ಅವರ ಬೆಂಬಲಿಗರು ರಾಹುಲ್ ಗಾಂಧಿ ನೇತೃತ್ವವನ್ನು ತಿರಸ್ಕರಿಸಿದ್ದಾರೆ!. ಮಹಾಘಟಬಂಧನ್ ಮೈತ್ರಿಕೂಟದೊಳಗೆ ಆರ್ಜೆಡಿ ಮತ್ತು ಕಾಂಗ್ರೆಸ್ ನಡುವಿನ ಮಹಾಭಾರತ ಮುಂದುವರೆದಿದೆ ಎಂದು ಹೇಳಿದರು. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ರನ್ನೆ ಬಿಂಬಿಸುವ ವಿಷಯವಾಗಿ ಎಲ್ಲರೂ ಒಮ್ಮತಕ್ಕೆ ಬಂದಿದ್ದಾರೆ ಎಂಬ ಮಾಧ್ಯಮಗಳ ವರದಿ ಮಧ್ಯೆ ಈ ಮಹತ್ವದ ಬೆಳವಣಿಗೆ ನಡೆದಿದೆ. ಮೈತ್ರಿಕೂಟದ ಎಲ್ಲಾ ಮಿತ್ರಪಕ್ಷಗಳು ತೇಜಸ್ವಿಗೆ ಬೆಂಬಲ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಆರ್ಜೆಡಿ ಮೂಲಗಳು ದೃಢಪಡಿಸಿದ್ದು, ಮಧ್ಯಾಹ್ನದ ವೇಳೆಗೆ ಔಪಚಾರಿಕ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
ತೇಜಸ್ವಿ ಯಾದವ್ರನ್ನು ಮಹಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವುದು ಕಾಂಗ್ರೆಸ್ಗೆ ಅನಿವಾರ್ಯವಾಗಿತ್ತು ಎಂದು ಮೂಲಗಳು ತಿಳಿಸಿವೆ. ಮಹಿಳೆಯರಿಗೆ 10,000 ರೂ. ನಗದು ವರ್ಗಾವಣೆಯನ್ನು ನೀಡುವ ಕೇಂದ್ರ ಮತ್ತು ಬಿಹಾರ ಸರ್ಕಾರದ ಯೋಜನೆಗಳಿಗೆ ಪ್ರತಿಕ್ರಿಯೆಯಾಗಿ, ಕಾಂಗ್ರೆಸ್ "ಜಾತಿ ಕಾರ್ಡ್" ಆಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಹಿಳೆಯರ ಉದ್ಯೋಗವನ್ನು ಗುರಿಯಾಗಿರಿಸಿಕೊಂಡ ಯೋಜನೆಗಳು ಸೇರಿದಂತೆ 10,000 ರೂ. ಯೋಜನೆಗಳು ತಳಮಟ್ಟದಲ್ಲಿ ಗಮನಾರ್ಹ ಪರಿಣಾಮ ಬೀರುತ್ತಿವೆ ಎಂದು ಕೈ ನಾಯಕರು ಅರಿತುಕೊಂಡಿದ್ದು, ಇದು ಚುನಾವಣೆಯಲ್ಲಿ ಪ್ರಮುಖ ಆಕರ್ಷಣೆಯಾಗುವ ಸಾಧ್ಯತೆ ಇರುವುದರಿಂದ, ತೇಜಸ್ವಿ ಮುಖವಿಟ್ಟುಕೊಂಡು ಚುನಾವಣೆ ಎದುರಿಸುವುದರಿಂದ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ನಂಬಿದೆ.
ಇಂತಹ ಸಂದರ್ಭದಲ್ಲಿ ತೇಜಸ್ವಿಯನ್ನು ಮುಂಚೂಣಿಗೆ ತರುವುದರಿಂದ ಸಾಂಪ್ರದಾಯಿಕ ಮುಸ್ಲಿಂ ಮತದಾರರು ಮಹಾ ಮೈತ್ರಿಕೂಟದೊಂದಿಗೆ ಗಟ್ಟಿಯಾಗಿ ನಿಲ್ಲಲಿದ್ದಾರೆ ಎಂಬುದು ಪಕ್ಷದ ತಂತ್ರ ಎಂದು ಮೂಲಗಳು ತಿಳಿಸಿವೆ. ಬಿಕ್ಕಟ್ಟನ್ನು ಪರಿಹರಿಸುವ ಕೊನೆಯ ಪ್ರಯತ್ನವಾಗಿ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬುಧವಾರ ಪಾಟ್ನಾಗೆ ಬಂದಿಳಿದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಪುತ್ರ ತೇಜಸ್ವಿ ಯಾದವ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.(ಏಜೆನ್ಸೀಸ್)