

ಬೆಂಗಳೂರು:
ಚುನಾವಣೆ ಬಂದಾಗ ಮಾತ್ರ ಹೋರಾಟ ಮಾಡಿದರೆ ಸಾಲದು. ಸದಾ ಸಂಘಟಿತವಾಗಿ ಅನ್ಯಾಯ ಮತ್ತು ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ಹೋರಾಟ ಮಾಡಬೇಕು ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಹಿಳಾ ದೌರ್ಜನ್ಯಗಳು ನಡೆದಾಗಲೂ ರಕ್ಷಣೆ ನೀಡದೆ, ಈ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಹಾಗಾಗಿ ಹೋರಾಟ ಮತ್ತು ಪ್ರತಿಭಟನೆ ಅನಿವಾರ್ಯ. ಈ ನಿಟ್ಟಿನಲ್ಲಿ ಮಹಿಳಾ ಮೋರ್ಚಾ ಸಕ್ರೀಯವಾಗಬೇಕು ಎಂದರು.
ವಾಲ್ಮೀಕಿ ನಿಗಮ ಮತ್ತು ಮೂಡ ಹಗರಣ ನಡೆಸಿರುವ ಸರ್ಕಾರ ಏನೂ ಆಗಿಯೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ. ನಿರಂತರವಾಗಿ ಮಹಿಳಾ ದೌರ್ಜನ್ಯ ನಡೆಯುತ್ತಿದ್ದರೂ, ಸಿಎಂ ಮತ್ತು ಗೃಹ ಸಚಿವರು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದರು.
ಈ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಯನ್ನೇ ಕೊಟ್ಟಿಲ್ಲ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ 3 ದಿನ ಮೊದಲು 3 ಕಂತು ಬಿಡುಗಡೆ ಮಾಡಿದ್ದರು. ಜಿಪಂ, ತಾಪಂ ಚುನಾವಣೆ ಬಂದಾಗ ಮತ್ತೆ ಕಂತು ಬಿಡುಗಡೆ ಆಗಲಿದೆ ಎಂದು ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಹಿರಿಯರ ತಪಸ್ಸು, ಕಾರ್ಯಕರ್ತರ ಶ್ರಮ, ಅವಿರತ ಹೋರಾಟ ಕಾರಣ. ಸಂಘಟನೆಯನ್ನು ಸಧೃಢಗೊಳಿಸಲು ಸದಸ್ಯತ್ವ ಅಭಿಯಾನ ಮಾಡಿ ಎಂದರು.
ಬೆಂಗಳೂರು- ಮೈಸೂರು ಪಾದಯಾತ್ರೆ ಯಶಸ್ವಿಯಲ್ಲಿ ಮಹಿಳೆಯರು ಸೇರಿದ್ದು, ಪಾದಯಾತ್ರೆಗೆ ಹೊಸ ಹುಮ್ಮಸ್ಸನ್ನು ನೀಡಿತ್ತು. ಯಡಿಯೂರಪ್ಪ, ಅನಂತಕುಮಾರ್, ವಿ.ಎಸ್.ಆಚಾರ್ಯ ಮೊದಲಾದ ಹಿರಿಯರು ಇಂಥ ಹೋರಾಟದಲ್ಲಿ ಭಾಗವಹಿಸಿದ್ದರು. ಪಾದಯಾತ್ರೆ, ಹೋರಾಟ ಎಂದರೆ ಯಡಿಯೂರಪ್ಪ ನೆನಪು ಮಾಡಿಕೊಳ್ಳುತ್ತಾರೆ ಎಂದರು.
ಆಡಳಿತ ಪಕ್ಷದವರು ಆತಂಕ ಪಟ್ಟುಕೊಂಡು ನಮ್ಮ ಪಾದಯಾತ್ರೆ ಶುರು ಆಗುವುದಕ್ಕೂ ಮೊದಲೇ ಜನಾಂದೋಲನ ಮಾಡಿದ್ದರು. ಆದರೂ ಪಾದಯಾತ್ರೆ ಯಶಸ್ವಿಯಾಯಿತು. ಅಮಿತ್ ಶಾ, ನಡ್ಡಾ, ಸಂತೋಷ್ ಅವರು ಈಚಿನ ದಿನಗಳಲ್ಲಿ ಯಾವುದೇ ಒಂದು ಪಕ್ಷ ಇಷ್ಟು ಯಶಸ್ವಿಯಾಗಿ ಹೋರಾಟ ಮಾಡಿರಲಿಲ್ಲ ಎಂದು ಹೇಳಿದ್ದು ತೃಪ್ತಿ ತಂದಿದೆ ಎಂದರು.
ಪಾದಯಾತ್ರೆಯ ನಂತರದ ಪರಿಣಾಮ ಹೇಗಿದೆ ಎಂದರೆ ಆಟೋ, ಟ್ಯಾಕ್ಸಿ ಚಾಲಕರು ಓಹ್ ವಿಜಯಣ್ಣ ಎಂದು ವಿಷ್ ಮಾಡುತ್ತಿದ್ದಾರೆ. ಇದು ಸಂತಸ ನೀಡುತ್ತಿದೆ ಎಂದರು.
ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಇಷ್ಟು ಆತಂಕಕ್ಕೆ ಗುರಿ ಮಾಡಿದ ಸಂದರ್ಭ ಯಾವತ್ತೂ ಇರಲಿಲ್ಲ. ಬಿಜೆಪಿ ಹೋರಾಟದಿಂದ ಅವರು ಒತ್ತಡಕ್ಕೆ ಸಿಲುಕಿದ್ದಾರೆ ಎಂದು ವಿಜಿಯೇಂದ್ರ ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಕು. ಕೆ.ಮಂಜುಳ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ನಿರ್ದಾಕ್ಷಿಣ್ಯ ಕ್ರಮ ಅಗತ್ಯ. ಆಗ ದುಷ್ಟರು, ದುರುಳರು, ಕ್ರಿಮಿಗಳು ಮನೆ ಸೇರಿಕೊಳ್ಳುತ್ತಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಮತ್ತು ಮಹಿಳಾ ಮೋರ್ಚಾ ರಾಜ್ಯ ಉಸ್ತುವಾರಿ ಸೋನಲ್ ಬೆನ್ ಪಟೇಲ್, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಡಾ.ಶೋಭಾ, ಮಹಿಳಾ ಮೋರ್ಚಾ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.