

Akhilesh Yadav: ದೇಶದಲ್ಲಿ ಇತ್ತೀಚೆಗೆ ಚಿನ್ನದ ಬೆಲೆ ಏರಿಕೆಗೆ ಬಿಜೆಪಿ ನಾಯಕರೇ ಕಾರಣ, ಕಪ್ಪು ಹಣದ ಬದಲಿಗೆ ಬಿಜೆಪಿ ನಾಯಕರು ಚಿನ್ನ ಸಂಗ್ರಹಿಸುತ್ತಿದ್ದಾರೆ ಎಂದು ಬುಧವಾರ(ಸೆ. 1) ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಚಿನ್ನದ ಬೆಲೆಗಳು ಎಲ್ಲಾ ದಾಖಲೆಗಳನ್ನು ಮುರಿದು ಪ್ರತಿ ಟೋಲಾಗೆ 1 ಲಕ್ಷ 20 ಸಾವಿರವನ್ನು ತಲುಪುತ್ತಿವೆ. ಬಿಜೆಪಿ ಆಡಳಿತದಲ್ಲಿ ಇತ್ತೀಚಿಗೆ ಚಿನ್ನದ ಬೆಲೆ ಏರಿಕೆಗೆ ಸಾಮಾನ್ಯ ನಾಗರಿಕರಲ್ಲಿ ಹೆಚ್ಚುತ್ತಿರುವ ಬೇಡಿಕೆ ಕಾರಣವಲ್ಲ, ಬದಲಾಗಿ ಬಿಜೆಪಿ ನಾಯಕರ ದೊಡ್ಡ ಪ್ರಮಾಣದ ಚಿನ್ನ ಸಂಗ್ರಹಣೆಯೇ ಕಾರಣ. ಇದು ಚಿನ್ನೀಕರಣದ ಹೆಸರಿನಲ್ಲಿ ಆಡಳಿತ ಪಕ್ಷದ ಭ್ರಷ್ಟ ಸದಸ್ಯರು ತಮ್ಮ ಅಕ್ರಮ ಹಣವನ್ನು ಅಮೂಲ್ಯ ಲೋಹಗಳಾಗಿ ಪರಿವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸತ್ಯವೆಂದರೆ ಈಗ ಬಡವನೊಬ್ಬ ತನ್ನ ಪ್ರೀತಿಪಾತ್ರರಿಗೆ ಮದುವೆಯ ಸಮಯದಲ್ಲಿ ಆಶೀರ್ವಾದವಾಗಿ ಒಂದು ಚಿನ್ನದ ಎಸಳನ್ನು ಸಹ ನೀಡಲು ಸಾಧ್ಯವಿಲ್ಲ. ಚಿನ್ನವನ್ನು ಮರೆತುಬಿಡಿ, ಬಿಜೆಪಿ ಸದಸ್ಯರಲ್ಲಿ ವ್ಯಾಪಕವಾಗಿ ಕಂಡುಬರುವ ಅಮೂಲ್ಯ ಲೋಹಗಳ ಸಂಗ್ರಹಣೆಯಿಂದಾಗಿ, ಬೆಳ್ಳಿ ಕೂಡ ಬಡವರು ಕೊಳ್ಳಲಾಗ್ತಿಲ್ಲ.
ಆದರೆ ಚಿನ್ನದ ಬೆಲೆ ಏರಿಕೆಗೆ ಬಿಜೆಪಿ ಪ್ರಚಾರದ ಸೆಲ್ ಏನು ಹೇಳುತ್ತದೆ ಅಂದ್ರೆ, ಅದನ್ನು ಅಂತಾರಾಷ್ಟ್ರೀಯ ಮಾರುಕಟ್ಟೆ ನಿರ್ಧರಿಸುತ್ತದೆ ಎನ್ನುತ್ತದೆ. ಇದೇ ನಿಜವಾಗಿದ್ದರೆ, ಇತರೆ ಐಷಾರಾಮಿ ಲೋಹಗಳ ಬೆಲೆಗಳು ಯಾವ ಆರ್ಥಿಕ ನಿಯಮ ಮತ್ತು ತತ್ವದಡಿಯಲ್ಲಿ ಏರುತ್ತಿವೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ಸರ್ಕಾರಗಳನ್ನು ಅಪಹಾಸ್ಯ ಮಾಡಿದ ಅವರು, ಹೆಚ್ಚು ಪ್ರಚಾರ ಪಡೆದ ಡ್ರೋನ್‌ಗಳು, ಬೈನಾಕ್ಯುಲರ್‌ಗಳು ಮತ್ತು ಬುಲ್ಡೋಜರ್‌ಗಳು ರಾಜಕೀಯ ವಿರೋಧಿಗಳಿಗೆ ಮಾತ್ರವೇ ಹೊರತು, ಅಕ್ರಮವಾಗಿ ಚಿನ್ನ ಸಂಗ್ರಹಿಸುವವರನ್ನು ಪತ್ತೆಹಚ್ಚಲು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)