ಜನರನ್ನು ವಿಭಜಿಸಿ, ಬೆಂಕಿ ಹಚ್ಚುವುದೇ ಬಿಜೆಪಿ ನಾಯಕರ ಕೆಲಸ: DK ಶಿವಕುಮಾರ್ ವಾಗ್ದಾಳಿ

Untitled design - 2025-09-10T131753.127
Published on

ಬೆಂಗಳೂರು: ಕೋಮು ಭಾವನೆ ಕೆರಳಿಸಿ, ಜನರನ್ನು ವಿಭಜಿಸಿ, ಬೆಂಕಿ ಹಚ್ಚುವುದೇ ಬಿಜೆಪಿ ನಾಯಕರ ಕೆಲಸ. ಅವರಿಗೆ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ” ಎಂದು ಡಿಸಿಎಂ DK ಶಿವಕುಮಾರ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಮದ್ದೂರು ಗಣೇಶ ವಿಸರ್ಜನೆ ವೇಳೆ ನಡೆದಿರುವ ಕಲ್ಲು ತೂರಾಟ ಹಾಗೂ ಅದರ ಬೆನ್ನಲ್ಲೇ ಬಿಜೆಪಿ ನಾಯಕರು ಮದ್ದೂರಿಗೆ ತೆರಳಿರುವ ಬಗ್ಗೆ ಕೇಳಿದಾಗ, “ಈ ಪ್ರಕರಣದ ಬಗ್ಗೆ ಈಗಾಗಲೇ ಸಿಎಂ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಹೊರ ರಾಜ್ಯಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ನನಗೆ ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನನಗೆ ಸಂಪೂರ್ಣ ಮಾಹಿತಿ ಸಿಗದೇ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ತಿಳಿಸಿದರು.

“ಬಿಜೆಪಿಯವರಿಗೆ ರಾಜಕಾರಣ ಮಾಡುವುದು ಬಿಟ್ಟು ಬೇರೆ ಕೆಲಸ ಏನಿದೆ? ಅವರು ದೆಹಲಿಗೆ ಹೋಗಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ನರೇಗಾ ಅನುದಾನ, ಮೇಕೆದಾಟು, ಮಹದಾಯಿ ನೀರಾವರಿ ಯೋಜನೆಗಳಿಗೆ ಅನುಮತಿ ತೆಗೆದುಕೊಂಡು ಬರಲಿ” ಎಂದು ಸವಾಲೆಸೆದರು.

ಸೈಲ್ ಬಂಧನದ ಅವಶ್ಯಕತೆ ಇರಲಿಲ್ಲ

ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಬಂಧನದ ವಿಚಾರವಾಗಿ ಕೇಳಿದಾಗ, “ಸತೀಶ್ ಸೈಲ್ ಅವರ ಬಂಧನದ ಅವಶ್ಯಕತೆ ಇರಲಿಲ್ಲ. ಈ ಪ್ರಕರಣದ ವಿಚಾರಣೆ 2010ರಿಂದಲೇ ನಡೆಯುತ್ತಿದೆ. ಕಾಂಗ್ರೆಸ್ ಶಾಸಕರ ಮೇಲೆ ಮಾತ್ರ ಗುರಿಯಾಗಿಸಿ ಇಂತಹ ದಾಳಿಗಳು ನಡೆಯುತ್ತಿವೆ. ಆಮೂಲಕ ಕಾಂಗ್ರೆಸ್ ನಾಯಕರಿಗೆ ತೊಂದರೆ ನೀಡುವ ಕೆಲಸ ನಡೆಯುತ್ತಿದೆ” ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net