ಭೀಮಾತೀರದಲ್ಲಿ ಬಿಜೆಪಿ ನಾಯಕರ ಸಂಚಲನ, ಪ್ರವಾಹ-ಅತಿವೃಷ್ಟಿಯಿಂದಾದ ಹಾನಿ ಪರಿಶೀಲನೆ

R ASHOK VISIT FLOOD AREA
ವಿಜಯಪುರ ಜಿಲ್ಲೆಯ ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಭೀಮಾ ನದಿ ಪಾತ್ರದಲ್ಲಿ ಬಿಜೆಪಿ ನಾಯಕರು ಪ್ರವಾಹ ಮತ್ತು ಅತಿವೃಷ್ಟಿಯಿಂದಾದ ಬೆಳೆ ಹಾನಿ ಪರಿಶೀಲಿಸಿದರು. ವಿಧಾನ ಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ, ವಿಪ ಸದಸ್ಯ ಸಿ.ಟಿ. ರವಿ ಸೇರಿದಂತೆ ಬಿಜೆಪಿ ನಾಯಕರಿದ್ದಾರೆ.
Published on

ವಿಜಯಪುರ: ಪ್ರವಾಹ ಮತ್ತು ಅತೀವೃಷ್ಠಿಯಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಭೀಮಾತೀರದ ರೈತರ ಜಮೀನುಗಳಿಗೆ ಶನಿವಾರ ವಿಧಾನ ಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ನೇತೃತ್ವದ ಬಿಜೆಪಿ ನಾಯಕರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತಲ್ಲದೇ ಅನ್ನದಾತನ ಅಹವಾಲು ಆಲಿಸಿತು.

ಇಂಡಿ ತಾಲೂಕಿನ ಅಂಜುಟಗಿ, ಅಗರಖೇಡ, ಮಿರಗಿ ಮತ್ತು ಆಲಮೇಲ ತಾಲೂಕಿನ ದೇವಣಗಾಂವ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು. ಪ್ರವಾಹದಿಂದ ದೊಡ್ಡ ಮಟ್ಟದ ನೀರು ಹೊಲಗಳಿಗೆ ನುಗ್ಗಿದ ಪರಿಣಾಮ ಬೆಳೆಗಳಿಗೆ ಆಗಿರುವ ಹಾನಿ ಕಂಡು ಬಿಜೆಪಿ ನಾಯಕರು ಮಮ್ಮಲ ಮರುಗಿದರಲ್ಲದೇ ತ್ವರಿತ ಪರಿಹಾರ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ರೈತರನ್ನು ಸಂತೈಸಿದರು.

ಅಪಾರ ಪ್ರಮಾಣದ ತೊಗರಿ, ಸೂರ್ಯಪಾನ, ಕಬ್ಬು, ಹತ್ತಿ ಹಾಳಾಗಿದ್ದು, ಅಲ್ಲಲ್ಲಿ ರೈತರು ಹಾಳಾದ ಈರುಳ್ಳಿ ಬೆಳೆ ಕಿತ್ತುಹಾಕುತ್ತಿರುವುದು ಕಂಡು ಕನಿಕರ ವ್ಯಕ್ತಪಡಿಸಿದರು. ಕಾಲುವೆ ಒಡೆದು ಅಪಾರ ಬೆಳೆ ಹಾನಿಯಾಗಿದ್ದು, ಮನೆ ಬಿದ್ದು ಬದುಕು ಬೀದಿಗೆ ಬಂದಿದ್ದು, ರಸ್ತೆಗಳು ಸಂಪೂರ್ಣ ಹಾಳಾಗಿರುವುದು, ಕಣ್ಣೀರಾದ ರೈತರು ಮನವಿ ಸಲ್ಲಿಸಿದ್ದು....ಹೀಗೆ ಮುಂತಾದ ದೃಶ್ಯಗಳು ನಾಯಕರ ಕಣ್ಣಾಲೆಯಲ್ಲಿ ನೀರು ಜಿನುಗಿಸಿತಲ್ಲದೇ ರಾಜ್ಯ ಸರ್ಕಾರದ ಮೇಲಿನ ಆಕ್ರೋಶ ಇಮ್ಮಡಿಗೊಳಿಸಿತು.

ಮಿರಗಿಯಲ್ಲಿ ರೈತನೋರ್ವ ನೋವು ತೋಡಿಕೊಳ್ಳುತ್ತಾ ‘ಈ ಬಾರಿ ಮಳೆ ಚೆನ್ನಾಗಿಯೇ ಬಂದಿತ್ತು, ಹೀಗಾಗಿ ಉತ್ತಮ ಫಸಲು ಬರುವ ನಿರೀಕ್ಷೆ ಇತ್ತು, ಕಷ್ಟಗಳೆಲ್ಲ ನೀಗುವ ಆಶಾಭಾವ ಮನೆ ಮಾಡಿತ್ತು, ಆದರೆ ಭಾರೀ ಮಳೆ ಹಾಗೂ ಪ್ರವಾಹದಲ್ಲಿ ಆ ಭಾವನೆ ಮತ್ತು ಕನಸುಗಳೆಲ್ಲ ಕೊಚ್ಚಿ ಹೋದವು’ ಎಂದು ದಯನೀಯವಾಗಿ ಹೇಳುತ್ತಿದ್ದರೆ ನಾಯಕರ ಎದೆ ಭಾರವಾಗಿತ್ತು.

ಆಗ ಭರವಸೆ ತುಂಬಿದ ಪ್ರತಿಪಕ್ಷ ನಾಯಕ ಆರ್. ಅಶೋಕ ಮತ್ತು ಸಿ.ಟಿ. ರವಿ ಮೊದಲಾದವರು, ‘ಈ ಸರ್ಕಾರಕ್ಕೆ ಜವಾಬ್ದಾರಿಯೇ ಇಲ್ಲದಂತಾಗಿದೆ, ಇಷ್ಟೊಂದು ತೊಂದರೆ ಎದುರಿಸುತ್ತಿದ್ದರೂ ಸ್ಥಳಕ್ಕೆ ಭೇಟಿ ನೀಡುವ ಸೌಜನ್ಯವೂ ಅವರಿಗೆ ಇಲ್ಲ ಎಂಬುದು ಬೇಜವಾಬ್ದಾರಿ ಸಂಗತಿ, ಆದರೆ ಪ್ರತಿಪಕ್ಷವಾಗಿರುವ ನಾವು ನಿಮ್ಮ ಧ್ವನಿಯಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ, ನಿಮ್ಮ ಜೊತೆ ನಾವಿದ್ದೇವೆ ಭಯಬೇಡ’ ಎಂದರು.

ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಅನೇಕ ರೈತರು ತಮ್ಮ ನೋವು ಹಾಗೂ ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಪ್ರತಿಪಕ್ಷ ನಾಯಕರಿಗೆ ನೀಡಿದರು.

ವಿಪ ಸದಸ್ಯ ಸಿ.ಟಿ. ರವಿ, ಪ್ರತಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ, ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ. ಗದ್ದಿಗೌಡರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಉಮೇಶ ಕಾರಜೋಳ, ವಿಜುಗೌಡ ಪಾಟೀಲ, ವಿವೇಕಾನಂದ ಡಬ್ಬಿ, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ, ಉಮೇಶ ಕೋಳಕೂರ, ಸುರೇಶ ಬಿರಾದಾರ, ಅನೀಲ ಜಮಾದಾರ, ಸಂಜೀವ ಐಹೊಳಿ, ಕೃಷ್ಣಾ ಗುನ್ನಾಳಕರ, ಸಾಬು ಮಾಶ್ಯಾಳ, ರವಿಕಾಂತ ವಗ್ಗೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net