

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ(Maharashtra Polls) ಒಂದು ದಿನ ಬಾಕಿ ಇದೆ. ಪ್ರಚಾರ ಕಡಿಮೆಯಾಗಿದೆ, ಅಭ್ಯರ್ಥಿಗಳು ಮತ್ತು ಚುನಾವಣಾ ಪಕ್ಷಗಳು ಆಂತರಿಕವಾಗಿ ತಂತ್ರಗಳನ್ನು ರೂಪಿಸುತ್ತಿವೆ. ಈ ನಡುವೆ ಪಾಲ್ಘರ್‌ನ ವಿರಾರ್ ಬಳಿಯ ಹೋಟೆಲ್‌ನಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಬಹುಜನ ವಿಕಾಸ್ ಅಘಾಡಿ ನಡುವೆ ಘರ್ಷಣೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಹೊರಬಿದ್ದಿದ್ದು ಭಾರೀ ಕೋಲಾಹಲ ಸೃಷ್ಟಿಯಾಗಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಹಣ ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿಯ ನಾಯಕನಿಂದ ಡೈರಿ ಪತ್ತೆಯಾಗಿದೆ ಎಂದು ಬಿವಿಎ ಮುಖ್ಯಸ್ಥ ಹಿತೇಂದ್ರ ಠಾಕೂರ್ ಹೇಳಿದ್ದಾರೆ. ಬಿಜೆಪಿ ಮುಖಂಡ ವಿನೋದ್ ತಾವ್ಡೆ 5 ಕೋಟಿ ನಗದು ತಂದಿದ್ದರು ಎಂದು ನಲಸೋಪಾರ ಶಾಸಕ ಕ್ಷಿತಿಜ್ ಠಾಕೂರ್ ಆರೋಪಿಸಿದ್ದಾರೆ.
ವಿರಾರ್ ಪೂರ್ವದ ಹೋಟೆಲ್ ವಿವಾಂಟಾದಲ್ಲಿ ಘಟನೆ ನಡೆದಿದ್ದು, ವಿನೋದ್ ತಾವ್ಡೆ ಅವರು ಚುನಾವಣಾ ಯೋಜನೆಗಳನ್ನು ರೂಪಿಸಲು ಬಂದಿದ್ದರು. ಗಲಾಟೆ ಇನ್ನೂ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ. ಬಿವಿಎ ಕಾರ್ಯಕರ್ತರು ಹೋಟೆಲ್‌ಗೆ ಮುತ್ತಿಗೆ ಹಾಕಿದ್ದಾರೆ. ಪೊಲೀಸರು ತಾವ್ಡೆಯನ್ನು ರೆಸಾರ್ಟ್‌ನಿಂದ ಹೊರತರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ, ಬಿಜೆಪಿಯವರ ಆಟ ಮುಗಿಯಿತು, ಚುನಾವಣಾ ಆಯೋಗ ಮಾಡಬೇಕಿದ್ದ ಕೆಲಸವನ್ನು ಕ್ಷಿತಿಜ್ ಠಾಕೂರ್ ಮಾಡಿದ್ದಾರೆ ಎಂದು ಶಿವಸೇನೆಯ ಯುಬಿಟಿ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ. ಆದರೆ ಹಣ ಹಂಚಿಕೆ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಬಿವಿಎ ಅವರ ಆರೋಪಗಳು ತಪ್ಪು, ತಾವ್ಡೆ ಅವರು ಹಣ ಹಂಚಿದ್ದಾರೆ ಎಂಬ ಆರೋಪ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ನಾಯಕ ಪ್ರವೀಣ್ ದಾರೇಕರ್ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ನಾಳೆ ಅಂದರೆ ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.(ಏಜೆನ್ಸೀಸ್)