

ಶಿವಮೊಗ್ಗ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಮೊದಲ ಪ್ರತಿಭಟನೆಯಲ್ಲೇ ಕಲ್ಲು ತೂರಾಟ, ಮೆಸ್ಕಾಂ ಕಚೇರಿ ಗಾಜು ಪುಡಿಪುಡಿಯಂತಹ ಅಹಿತಕರ ಘಟನೆಗಳು ನಡೆದಿವೆ. ಪೊಲೀಸರು ಮುನ್ನೆಚ್ಚರಿಕೆ ವಹಿಸಿ ಬ್ಯಾರಿಕೇಡ್ ಹಾಕಿದ್ದರೂ ಬಿಜೆಪಿ ಕಾರ್ಯಕರ್ತರು ಪೊಲೀಸರನ್ನು ತಳ್ಳಿ ಮೆಸ್ಕಾಂ ಕಚೇರಿ ಅವರಣದೊಳಗೆ ನುಗ್ಗಿ, ಕಲ್ಲು ತೂರಾಟ ಮಾಡಿದರು. ಹೀಗಾಗಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಶಾಸಕ ಎಸ್.ಎನ್.ಚನ್ನಬಸಪ್ಪ ಸೇರಿ ಹಲವರನ್ನು ವಶಕ್ಕೆ ಪಡದರು.
ವಿದ್ಯುತ್ ದರ ಹೆಚ್ಚಳ ಖಂಡಿಸಿ ಬಿಜೆಪಿ ನಗರ ಘಟಕ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಕಾರ್ಯಕರ್ತರು ಕೆಇಬಿ ವೃತ್ತದಲ್ಲಿರುವ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ ಪರಿಣಾಮ ಮೆಸ್ಕಾಂ ಕಚೇರಿಯ ಕಿಟಕಿ, ಸೂಚನ ಫಲಕಗಳ ಗಾಜುಗಳು ಪುಡಿ ಪುಡಿ ಆದವು.
200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದರೆ ಮತ್ತೊಂದೆಡೆ ಸದ್ದಿಲ್ಲದೇ ಮೆಸ್ಕಾಂ ಪ್ರತಿ ಯೂನಿಟ್ ದರ ಏರಿಕೆ ಮಾಡಿದೆ. ಇದರಿಂದ ಗ್ರಾಹಕರು ಮೂರ್ನಾಲ್ಕು ಪಟ್ಟು ಹೆಚ್ಚುವರಿ ವಿದ್ಯುತ್ ಶುಲ್ಕ ಪಾವತಿಸುವಂತಾಗಿದೆ ಎಂದು ಕಿಡಿಕಾರಿದರು. ಮುತ್ತಿಗೆಗೂ ಮುನ್ನ ಮೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲವು ಕಾರ್ಯಕರ್ತರು ಮೆಸ್ಕಾಂ ಕಚೇರಿಯ ಕಿಟಕಿ ಮತ್ತು ನಾಮಫಲಕಗಳಿಗೆ ಕಲ್ಲು ತೂರಿದರು.
ವಶಕ್ಕೆ ಪಡೆದ ನಂತರ ಪರಿಸ್ಥಿತಿ ತಿಳಿ:
ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಮೇಯರ್ ಎಸ್.ಶಿವಕುಮಾರ್ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸ್ ವಾಹನಕ್ಕೆ ಅಡ್ಡಲಾಗಿ ಕುಳಿತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ರಸ್ತೆಯಲ್ಲಿ ಕೆಎಸ್‌ಅರ್‌ಟಿಸಿ ಬಸ್ ಅಡ್ಡಗಟ್ಟಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಮೆಸ್ಕಾಂ ಎದುರಿನ ವೃತ್ತದಲ್ಲಿ ವಾಹನ ಸಂಚಾರ ಅಸ್ತವ್ಯಗೊಂಡಿತ್ತು. ಪೊಲೀಸರು ಪ್ರತಿಭಟನಾನಿರತ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಿದರು.