ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಲು ಈ ಧೀಮಂತ ನಾಯಕರೇ ಕಾರಣ; ಸಿಎಂ ದೇವೇಂದ್ರ ಫಡ್ನವೀಸ್ ಹೀಗೇಳಿದ್ದೇಕೆ? | Devendra Fadnavis

Untitled design - 2025-04-06T154247.857
Published on

ಮುಂಬೈ: ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು ತನ್ನ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಲು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ, ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಂತಹ ದಿಗ್ಗಜರ ಪ್ರಯತ್ನಗಳು ಕಾರಣ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Fadnavis) ಭಾನುವಾರ (ಏಪ್ರಿಲ್​ 6) ಹೇಳಿದ್ದಾರೆ.

ಬಿಜೆಪಿ 1980ರಲ್ಲಿ ಸ್ಥಾಪನೆಯಾಯಿತು. ಬಿಜೆಪಿ ರಚನೆಯ ನಂತರ 1984ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕೇವಲ ಎರಡು ಸ್ಥಾನಗಳನ್ನು ಗೆದ್ದಿತ್ತು. ಶ್ಯಾಮ ಪ್ರಸಾದ್ ಮುಖರ್ಜಿ, ಪಂಡಿತ್ ದೀನದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಯತ್ನಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದ ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷವಾಗಿದೆ ಎಂದು ಫಡ್ನವೀಸ್​​ ಹೇಳಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ನಾಗ್ಪುರದಲ್ಲಿ ಬಿಜೆಪಿಯ ಹೊಸ ಕಚೇರಿಗೆ ಶಿಲಾನ್ಯಾಸ ನೆರವೇರಿಸಿದ ನಂತರ, ನಮ್ಮ ಸ್ವಂತ ಮನೆಯ ಶಿಲಾನ್ಯಾಸ ನಡೆಯುತ್ತಿರುವಂತೆ ಭಾಸವಾಗುತ್ತಿದೆ ಎಂದು ಫಡ್ನವೀಸ್ ಹೇಳಿದರು. ಬಿಜೆಪಿಯ ಹೊಸ ಕಚೇರಿಗೆ ಅವರು 5 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಣಿಗೆ ನೀಡಬೇಕೆಂದು ವಿನಂತಿಸಿದ್ದಾರೆ.

ಬಿಜೆಪಿಯ ಉದಯ ಹೀಗೆ

ಬಿಜೆಪಿಯ ಉದಯವು 1951ರಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಸ್ಥಾಪಿಸಿದ ಭಾರತೀಯ ಜನಸಂಘದೊಂದಿಗೆ ಸಂಬಂಧ ಹೊಂದಿದೆ. ಜನಸಂಘವು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ (ಆರ್‌ಎಸ್‌ಎಸ್) ಪ್ರೇರಿತವಾಗಿದ್ದು ಹಿಂದೂ ರಾಷ್ಟ್ರೀಯತೆ ಮತ್ತು ಸಾಂಸ್ಕೃತಿಕ ಏಕತೆಯ ವಿಚಾರಗಳನ್ನು ಉತ್ತೇಜಿಸಿತು. ಈ ಪಕ್ಷವು ಪ್ರಾಥಮಿಕವಾಗಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಹೊರಹೊಮ್ಮಿತು ಮತ್ತು 1977ರಲ್ಲಿ ತುರ್ತು ಪರಿಸ್ಥಿತಿಯ ನಂತರ ಜನತಾ ಪಕ್ಷದ ರಚನೆಯಲ್ಲಿ ಸೇರಿಕೊಂಡಿತು. ಆದರೆ ಜನತಾ ಪಕ್ಷದ ಪ್ರಯೋಗ ವಿಫಲವಾಯಿತು ಮತ್ತು ಭಿನ್ನಾಭಿಪ್ರಾಯಗಳಿಂದಾಗಿ ಜನಸಂಘದ ನಾಯಕರು 1980ರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net