ಹೈದರಾಬಾದ್ ಚುನಾವಣೆಯಲ್ಲಿ ಕಮಲ ಕಮಾಲ್; ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

Nation Anchor
Published on

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್​ಎಂಸಿ)ಚುನಾವಣೆಯಲ್ಲಿ ಬಿಜೆಪಿ 48 ವಾರ್ಡ್​ಗಳಲ್ಲಿ ಜಯ ದಾಖಲಿಸಿದ್ದು, ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ತೆಲಂಗಾಣದಲ್ಲಿ ದೃಢ ನೆಲೆ ಕಂಡುಕೊಳ್ಳುವ ಮುನ್ಸೂಚನೆ ನೀಡಿದೆ. ಕಳೆದ ತಿಂಗಳು ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಡಬ್ಬಾಕ್ ಕ್ಷೇತ್ರದಲ್ಲಿ ಜಯಗಳಿಸಿತ್ತು. 2016ರ ಜಿಎಚ್​ಎಂಸಿ ಚುನಾವಣೆಯಲ್ಲಿ ಬಿಜೆಪಿ ಕೇವಲ ನಾಲ್ಕು ಸ್ಥಾನ ಗಳಿಸಿತ್ತು. ಆಗ ಟಿಡಿಪಿ ಮತ್ತು ಬಿಜೆಪಿ ಮೈತ್ರಿ ಇತ್ತು. ತೆಲಂಗಾಣ ರಾಷ್ಟ್ರೀಯ ಪಕ್ಷ (ಟಿಆರ್​ಎಸ್) 55 ಸ್ಥಾನಗಳನ್ನು ತನ್ನದಾಗಿಸಿಕೊಂಡು ದೊಡ್ಡ ಪಕ್ಷವಾಗಿದೆ. 2016ರಲ್ಲಿ 99 ವಾರ್ಡ್​ಗಲ್ಲಿ ಗೆದ್ದು ಅಧಿಕಾರ ಹಿಡಿದಿತ್ತು. ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹದುಲ್-ಮುಸ್ಲಿಮೀನ್ (ಎಐಎಂಐಎಂ) 44 ಸ್ಥಾನಗಳನ್ನು ಗೆದ್ದುಕೊಂಡಿದ್ದು, ನಿರ್ಣಾಯಕ ಸ್ಥಾನದಲ್ಲಿ ಇದೆ. ದಯನೀಯ ಸ್ಥಿತಿಯಲ್ಲಿರುವ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಜಯ ಗಳಿಸಿದೆ.

150 ವಾರ್ಡ್ ಪೈಕಿ 149ರ ಫಲಿತಾಂಶ ಪ್ರಕಟವಾಗಿದ್ದು, ಯಾವುದೇ ಪಕ್ಷ ಸರಳ ಬಹುಮತಕ್ಕೆ (76) ಅಗತ್ಯವಾದ ಸ್ಥಾನ ಪಡೆಯದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಟಿಆರ್​ಎಸ್ ಎಲ್ಲ ವಾರ್ಡ್​ಗಳಲ್ಲೂ, ಬಿಜೆಪಿ 149, ಕಾಂಗ್ರೆಸ್ 146, ಎಐಎಂಐಎಂ 51, ಟಿಡಿಪಿ 106 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಡಿ. 1ರಂದು ಚುನಾವಣೆ ನಡೆದಿತ್ತು. ಶೇ. 46.55 ಮತದಾನ ದಾಖಲಾಗಿತ್ತು. ಬಿಜೆಪಿ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವು ಮುಖಂಡರು ರ‍್ಯಾಲಿ ನಡೆಸಿದ್ದರು.

ತೆಲಂಗಾಣದಲ್ಲೂ ಬಿಜೆಪಿ ಭದ್ರವಾಗಿ ನೆಲೆಯೂರಲಿದೆ. ಹೈದರಾಬಾದ್ ಪಾಲಿಕೆ ಫಲಿತಾಂಶ ದಿಕ್ಸೂಚಿಯಾಗಿದೆ. ಟಿಆರ್​ಎಸ್ ಅಧಿಕಾರ ದುರ್ಬಳಕೆ, ಕೌಟುಂಬಿಕ ಪಾರುಪತ್ಯ ಅಂತ್ಯವಾಗ ಲಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ 2ನೇ ರಾಜ್ಯ ತೆಲಂಗಾಣ ಆಗಲಿದೆ. | ಡಾ.ಕೆ.ಸುಧಾಕರ್ ಆರೋಗ್ಯ ಸಚಿವ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಮೂಲಕ ಬಿಜೆಪಿ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಭವಿಷ್ಯದಲ್ಲಿ ತೆಲಂಗಾಣದಲ್ಲಿ ರಾಷ್ಟ್ರೀಯ ವಿಚಾರದ ರಾಜಕಾರಣ ಮೂಡಿಬರಲಿದೆ. ಇದು ಮಹಾ ವಿಜಯದ ಪ್ರಥಮ ಹೆಜ್ಜೆ. | ಸಿ.ಟಿ. ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಹೆಜ್ಜೆಯನ್ನು ಭದ್ರವಾಗಿ ಊರಲಾಗಿದೆ. ಇದು ದಕ್ಷಿಣ ಭಾರತದಲ್ಲಿ ಆಳವಾದ ಪರಿಣಾಮ ಬೀರಲಿದೆ. ತಮಿಳುನಾಡಿನ ಚುನಾವಣೆಯಲ್ಲೂ ನಾವು ದೊಡ್ಡ ಪ್ರವೇಶ ಪಡೆಯಲಿದ್ದೇವೆ. | ಖುಷ್ಬೂ ಸುಂದರ್ ಬಿಜೆಪಿ ನಾಯಕಿ

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹಿನ್ನಡೆ

ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್​ನ ಆರು ಸ್ಥಾನಗಳಿಗೆ ಡಿ. 1ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಮೈತ್ರಿಕೂಟದ ಅಂಗಪಕ್ಷಗಳಾದ ಎನ್​ಸಿಪಿ ಮತ್ತು ಕಾಂಗ್ರೆಸ್ ತಲಾ ಎರಡು ಸ್ಥಾನ ಪಡೆದುಕೊಂಡಿವೆ. ಉಳಿದ ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ. ಮೈತ್ರಿ ಸರ್ಕಾರದ ನೇತೃತ್ವ ವಹಿಸಿರುವ ಶಿವಸೇನೆ ಒಂದು ಸ್ಥಾನವನ್ನೂ ಗೆದ್ದಿಲ್ಲ. ಶಿವಸೇನೆಯಿಂದ ಸ್ಪರ್ಧಿಸಿದ್ದ ಏಕೈಕ ಅಭ್ಯರ್ಥಿ ಅಮರಾವತಿ ಶಿಕ್ಷಕರ ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಅಮರಿಶ್ ಪಟೇಲ್ ಧುಲೆ-ನಂದೂರ್ಬಾರ್ ಸ್ಥಳೀಯ ಸಂಸ್ಥೆ ಕ್ಷೇತ್ರದ ಉಪಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಕಾಂಗ್ರೆಸ್​ನಿಂದ ಗೆದ್ದಿದ್ದ ಅಮರಿಶ್, ಬಿಜೆಪಿ ಸೇರಿದ್ದ ಕಾರಣ ರಾಜೀನಾಮೆ ನೀಡಿದ್ದರು. ಈಗ ಮರುಆಯ್ಕೆ ಆಗಿದ್ದಾರೆ. ಆರ್​ಎಸ್​ಎಸ್​ನ ಮುಖ್ಯ ಕಾರ್ಯಾಲಯ, ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಲೋಕಸಭಾ ಕ್ಷೇತ್ರ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ನಾಗಪುರ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net