ಮುಡಾ ಹಗರಣದ ಸೃಷ್ಟಿಕರ್ತರೇ ಬಿಜೆಪಿಯವರು: ದಿನೇಶ್ ಗುಂಡೂರಾವ್ ಆರೋಪ

ವಿಜಯವಾಣಿ (20)
Published on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ತವರೂರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಹಗರಣಗಳ ಸರಮಾಲೆಯನ್ನು ಹೊತ್ತಿರುವ ಸಿದ್ದರಾಮಯ್ಯ ಈ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಬೇಕು ಎಂದು ಬಿಜೆಪಿ ನಾಯಕರು ಪಟ್ಟುಹಿಡಿದಿದ್ದಾರೆ. ಈ ಮಧ್ಯೆ ಮುಡಾ ಹಗರಣದ ಸೃಷ್ಟಿಕರ್ತರೇ ಬಿಜೆಪಿಯವರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

"ಬಿಜೆಪಿಯವರ ಆಡಳಿತಾವಧಿಯಲ್ಲೇ ಮುಡಾ ಹಗರಣ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೂ ತಮ್ಮ ಹಗರಣವನ್ನು ಒಪ್ಪಿಕೊಳ್ಳದೆ ನಮ್ಮ ಸರ್ಕಾರದ ಮೇಲೆ ಅವರು ಗೂಬೆ ಕೂರಿಸುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಸರ್ಕಾರದ ಮೇಲೆ ತಪ್ಪು ಅಭಿಪ್ರಾಯ ಮೂಡಬಾರದು ಎನ್ನುವ ಕಾರಣಕ್ಕೆ ಮುಡಾ ನಿವೇಶನ ಹಂಚಿಕೆಯ ಅಕ್ರಮವನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡುವ ಉದ್ದೇಶದಿಂದ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿದೆ" ಎಂದರು.

"ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶ್ರೀ ಪಿ.ಎನ್.ದೇಸಾಯಿ ನೇತೃತ್ವದ ಆಯೋಗವು ಮುಡಾ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ ತನಿಖೆ ನಡೆಸಲಿದೆ" ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಸರಣಿ ಆರೋಪಗಳನ್ನು ತಳ್ಳಿಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net