

Mamata Banerjee: ಬಂಗಾಳಿ ಭಾಷೆ ಮಾತನಾಡುವ ಜನರ ವಿರುದ್ಧ ಬಿಜೆಪಿ ಭಾಷಾ ಭಯೋತ್ಪಾದನೆ ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಕೊಲ್ಕೋತ್ತಾದಲ್ಲಿ ಸೋಮವಾರ ಆಯೋಜಿಸಿದ್ದ ಟಿಎಂಸಿ ಹುತಾತ್ಮರ ದಿನಾಚರಣೆ ರ್ಯಾಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಮಮತಾ, ''ಬಿಜೆಪಿ ತನ್ನ ಭಾಷೆ ಭಯೋತ್ಪಾದನೆಯನ್ನ ನಿಲ್ಲಿಸದಿದ್ದರೆ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ'' ಎಂದು ಎಚ್ಚರಿಸಿದರು.
ಎನ್‌ಆರ್‌ಸಿ ನೋಟಿಸ್‌ಗಳಿಂದ ಹಿಡಿದು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗ್ತಿದೆ. 2019ರಲ್ಲಿ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದರು. ಈಗ, ಮತದಾರರ ಪಟ್ಟಿಯಿಂದ ಬಂಗಾಳಿಗಳ ಹೆಸರುಗಳನ್ನು ತೆಗೆಯಲು ಅಧಿಸೂಚನೆಗಳನ್ನು ಹೊರಡಿಸಿದ್ದಾರೆ ಎಂದು ಆರೋಪಿಸಿದರು.
ಇತರ ರಾಜ್ಯಗಳಿಂದ ಬಂದ ಸುಮಾರು 1.5 ಕೋಟಿ ವಲಸಿಗರಿಗೆ ಪಶ್ಚಿಮ ಬಂಗಾಳ ಆಶ್ರಯ ನೀಡಿದೆ. ಆದರೆ, ಅವರು ಎಂದಿಗೂ ಕಿರುಕುಳವನ್ನು ಎದುರಿಸಿಲ್ಲ. ನಾವು ಭಾರತದಾದ್ಯಂತದ ಜನರನ್ನು ಸ್ವಾಗತಿಸುತ್ತೇವೆ. ಆದರೆ, ಬಿಜೆಪಿ ಬಂಗಾಳಿಗಳಿಗೆ ಏನು ಮಾಡುತ್ತಿದೆ ಎಂಬುದನ್ನು ನೀವೇ ನೋಡಿ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ''ಅವರು ತಮ್ಮದೇ ರಾಜ್ಯವನ್ನು ನಿಭಾಯಿಸಲು ಸಾಧ್ಯವಿಲ್ಲ. ಆದರೆ, ಪಶ್ಚಿಮ ಬಂಗಾಳದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಬಂಗಾಳದ ನಿವಾಸಿಗಳಿಗೆ NRC ನೋಟಿಸ್‌ಗಳನ್ನು ಕಳುಹಿಸುವ ಹಕ್ಕನ್ನು ಅಸ್ಸಾಂ ಸರ್ಕಾರಕ್ಕೆ ನೀಡಿದವರು ಯಾರು?'' ಎಂದು ಪ್ರಶ್ನಿಸಿದರು.
ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸಿಎಂ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ತಮ್ಮ ಬಂಗಾಳಿ ಅಸ್ಮಿತೆಯ ದಾಳವನ್ನ ಉರುಳಿಸಿ ವಾಗ್ದಾಳಿ ನಡೆಸಿದ್ದಾರೆ.(ಏಜೆನ್ಸೀಸ್)