ಬಾಣಂತಿಯರ ಸಾವಿಗೆ ಸರ್ಕಾರ ನಿರ್ಲಕ್ಷೃವೇ ಕಾರಣ

IMG-20241209-WA0049.jpg
Published on

- ಆರೋಗ್ಯ ಸಚಿವರ ಬೇಜವಾಬ್ದಾರಿದಿಂದ ಸಮಸ್ಯೆಗಳ ಸೃಷ್ಟಿ

-ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಆಸ್ಪತ್ರೆಗಳಲ್ಲಿ ಶಿಶು, ಬಾಣಂತಿಯರ ಸಾವಿನಲ್ಲೂ ರಾಜ್ಯ ಸರ್ಕಾರ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದು, ಬಡವರ ಸಾವಿಗೆ ಬೆಲೆ ಇಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾಸ್ಪತ್ರೆಗೆ ಭೇಟಿ ವೈದ್ಯರು, ರೋಗಿಗಳ ಜತೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕಳಪೆ ಮಟ್ಟದ ಔಷಧ, ವೈದ್ಯರ, ಆರೋಗ್ಯ ಸಚಿವರ ನಿರ್ಲಕ್ಷೃದಿಂದಾಗಿ ಶಿಶು, ಬಾಣಂತಿಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ನಿರ್ಲಕ್ಷೃದಿಂದಾಗಿ ಬಡವರಿಗೆ ಅನ್ಯಾಯವಾಗುತ್ತಿದೆ ಎಂದು ಟೀಕಿಸಿದರು.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು ಬಾಣಂತಿಯರ ಸಾವಿಗೆ ಬೆಲೆ ಕೊಡುತ್ತಿಲ್ಲ. ತಮ್ಮ ನಿರ್ಲಕ್ಷೃ ಧೋರಣೆ, ಬೇಜವಾಬ್ದಾರಿತನದಿಂದ ಬಡವರು ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಗುಣಮಟ್ಟದ ಭೌಷಧ, ಸೌಲಭ್ಯ ಕಲ್ಪಿಸಲು ಸಾಧ್ಯವಾಗದೆ ಪರದಾಡುತ್ತಿದೆ. ಆಸ್ಪತ್ರೆಗಳಲ್ಲಿ ಸಾವುಗಳ ಪ್ರಕರಣ ಸಂಖ್ಯೆ ಹೆಚ್ಚುತ್ತಿದ್ದರು, ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಯಾವ ಕಾರಣಕ್ಕೆ ಶಿಶು, ಬಾಣಂತಿಯರು ಸಾವನ್ನೊಪ್ಪುತ್ತಿದ್ದಾರೆ ಎಂಬ ಮಾಹಿತಿ ಕೂಡ ಸರ್ಕಾರದ ಬಳಿ ಇಲ್ಲವೇ ಇಲ್ಲ. ಇಂತಹ ನಿರ್ಲಕ್ಷೃ, ಬಡ ವಿರೋಧಿಗಳ ಸರ್ಕಾರ ಯಾಕೆ ಬೇಕು ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ವಿಧಾನಪರಿಷತ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬಾಣಂತಿಯರು ಮತ್ತು ಹಸುಗೂಸುಗಳ ಸಾವಿನ ವಿಷಯದಲ್ಲಿ ರಾಜ್ಯಾದ್ಯಂತ ಗೊಂದಲದ ವಾತಾವರಣ ಇದೆ. ಆಸ್ಪತ್ರೆಗಳು ಶವಾಗಾರವಾಗುವ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ.ಕಾಂಗ್ರೆಸ್ ಸರ್ಕಾರವೇ ಇಂಥ ಪರಿಸ್ಥಿತಿಗೆ ಕಾರಣ. ಕಾಂಗ್ರೆಸ್ಸಿಗರು ಭ್ರಷ್ಟಾಚಾರ ಮಾಡುವ ಕಡೆ ಗಮನ ಕೊಡುತ್ತಿದ್ದು, ಆಸ್ಪತ್ರೆಗಳ ಮೇಲೆ ನಿಯಂತ್ರಣ ಇಲ್ಲವಾಗಿದೆ. ಔಷಧಿ ಕೊಂಡುಕೊಳ್ಳುವಾಗ ಬ್ಲಾಕ ಮಾಡಿದ ಕಳಪೆ ಔಷಧಿಗಳನ್ನು ಖರೀದಿಸಿ ಬಳಸಿದ್ದರಿಂದ ಅನೇಕ ಕಡೆ ಇಂಥ ದಾರುಣ ಘಟನೆಗಳು ನಡೆದಿವೆ ಎಂದು ದೂರಿದರು.

ಶಾಸಕ ಡಾ.ಅಶ್ವತ್ಥನಾರಾಯಣ್, ಶಾಸಕಿ ಶಶಿಕಲಾ ಜೊಲ್ಲೆ, ಹೇಮಲತಾ ನಾಯಕ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೇನಕೆ, ಸಂಜಯ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಇತರರಿದ್ದರು.

ಫೋಟೋ

9ಮಂಜು4- ಬೆಳಗಾವಿ ನಗರದ ಜಿಲ್ಲಾಸ್ಪತ್ರೆಗೆ ಬಿ.ವೈ.ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿದರು. ಡಾ.ಅಶ್ವತ್ಥನಾರಾಯಣ್, ಶಶಿಕಲಾ ಜೊಲ್ಲೆ, ಹೇಮಲತಾ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net