ರಾಜ್ಯದಲ್ಲಿ ವರಿಷ್ಠ ಮಂಡಳಿ ರಾಜಕೀಯ; ದೆಹಲಿಯಿಂದ ಉರುಳಿದ ದಾಳಕ್ಕೆ ಪೆಚ್ಚು: ಭರವಸೆಗಳಿಗೆ ಕೊಡಲಿ ಪೆಟ್ಟು

page 7 3
Published on

ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರಿಗೆ ಒಳಗೊಳಗೆ ಇರುಸುಮುರಿಸು ಉಂಟಾಗಿದೆ, ತಾವು ಶಿಫಾರಸು ಮಾಡಿದ ಎಲ್ಲ ಹೆಸರಿಗೂ ದೆಹಲಿಯಲ್ಲಿ ಕುಳಿತವರು ಸಹಮತ ವ್ಯಕ್ತಪಡಿಸಿಲ್ಲ. ವಿರೋಧಗಳನ್ನೂ ಪರಿಗಣಿಸಿಲ್ಲ, ವಿಶೇಷ ಕಾರಣಕ್ಕೆ ಮಾಡಿದ್ದ ಮನವಿಗಳನ್ನೂ ಪುರಸ್ಕರಿಸದೇ ಹೋದರು. ಹಾಗೆಂದು ಬಹಿರಂಗವಾಗಿ ಅಸಮಾಧಾನ ಹೊರಹಾಕದೆ ಮುಗ್ಗುಮ್ಮಾಗಿ ಉಳಿಯುವ ಸರದಿ ರಾಜ್ಯ ನಾಯಕರದ್ದಾಗಿದೆ.

ರಾಜ್ಯದ ಯಾವ ಮುಖಂಡರ ಶಿಫಾರಸಿಗೆ ಹೈಕಮಾಂಡ್ ಮಣೆ ಹಾಕುತದೆ ಎಂಬುದರ ಮೇಲೆ ಪಕ್ಷದಲ್ಲಿ ಆ ನಾಯಕರ ಸಾಮರ್ಥ್ಯ ಅಳೆಯುವ ಪರಿಪಾಠ ಪಕ್ಷಗಳಲ್ಲಿದೆ. ರಾಜ್ಯಸಭೆ ಮತ್ತು ಪರಿಷತ್ ಅಭ್ಯರ್ಥಿಗಳ ಆಯ್ಕೆಯು ರಾಜ್ಯದ ಯಾವುದೇ ಮುಂಚೂಣಿ ನಾಯಕರಿಗೆ ಪೂರ್ಣ ಸಮಾಧಾನ ತಂದಿಲ್ಲ. ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವೇಳೆ ಬಿಜೆಪಿ ವರಿಷ್ಠರು ರಾಜ್ಯ ಕೋರ್ ಕಮಿಟಿ ಕಳಿಸಿದ್ದ ಹೆಸರನ್ನು ಬದಿಗಿಟ್ಟು, ಪಕ್ಷ ನಿಷ್ಠರಿಗೆ ಮಣೆ ಹಾಕಿದರು. ಬಂಡಾಯಕ್ಕೆಲ್ಲ ಸೊಪ್ಪುಹಾಕಲ್ಲ ಎಂಬ ಸಂದೇಶ ರವಾನಿಸುವ ಜತೆಗೆ ಪಕ್ಷದ ವಲಯದಲ್ಲಿ ಭೇಷ್ ಎನಿಸಿಕೊಂಡರು. ಇದೇವೇಳೆ ತಾವು ಆಕಾಂಕ್ಷಿಗಳಿಗೆ ಕೊಟ್ಟ ಭರವಸೆಗೆ ಬೆಲೆ ಇಲ್ಲದಂತಾಯಿಯಲ್ಲ ಎಂದು ರಾಜ್ಯ ನಾಯಕರು ತಲೆ ಚಚ್ಚಿಕೊಳ್ಳುವಂತಾಯಿತು. ಇದೀಗ ಪರಿಷತ್ ಆಯ್ಕೆ ವೇಳೆ ಕಾಂಗ್ರೆಸ್​ನಲ್ಲಿ ಒಂದು ಸ್ಥಾನದ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲದಾಯಿತು. ಸಿದ್ದರಾಮಯ್ಯ ಇದ್ದಿದ್ದರಲ್ಲಿ ಹೆಚ್ಚಿನ ಯಶ ಪಡೆದು ಕೊಂಡರು. ಅವರು ಪ್ರಸ್ತಾಪಿಸಿದ ನಸೀರ್ ಅಹ್ಮದ್ ಹೆಸರಿಗೆ ಹೈಕಮಾಂಡ್ ಮರು ಮಾತಿಲ್ಲದೆ ಮುದ್ರೆ ಒತ್ತಿದೆ. ಹಿಂದುಳಿದ ವರ್ಗಕ್ಕೆ ಮೀಸಲಾದ ಕೋಟದಲ್ಲಿ ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸಿದ್ದವರಿಗೆ ಟಿಕೆಟ್ ಸಿಗದೆ ಹೋಯಿತು. ನಸೀರ್​ಗೆ ಅವಕಾಶ ಕೊಡಬಾರದೆಂದು ದನಿ ಎತ್ತಿ ದೂರು ಕೊಟ್ಟಿದ್ದ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪಗೆ ಹಿನ್ನೆಡೆಯಾಯಿತು. ಬಿಜೆಪಿ ವಿಚಾರಕ್ಕೆ ಬಂದರೆ ಮೂವರಿಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾದರೂ, ಎಚ್.ವಿಶ್ವನಾಥ್ ಕೈಬಿಟ್ಟಿದ್ದರಿಂದ ಕೊಟ್ಟಮಾತು ಉಳಿಸಿಕೊಳ್ಳಲಾಗದ ಸಂಕಟ ಉಳಿದುಹೋಗಿದೆ.

ಬೆಳೆದ ಅತಂತ್ರಿಗರ ಪಟ್ಟಿ: ರಾಜ್ಯದಲ್ಲೀಗ ಅತಂತ್ರ ರಾಜಕಾರಣಿಗಳ ಪಟ್ಟಿ ಬೆಳೆಯಲಾರಂಭಿಸಿದೆ. 2019ರ ಲೋಕಸಭೆ ಹಾಗೂ ಇತ್ತೀಚಿನ ವಿಧಾನಸಭೆ ಚುನಾವಣೆಗಳಲ್ಲಿ ಸೋತರೂ ರಾಜ್ಯಸಭೆ ಹಾಗೂ ವಿಧಾನಪರಿಷತ್ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದ ಹಲವು ನಾಯಕರಿಗೆ ಈಗ ಅಕ್ಷರಶಃ ಸಕ್ರಿಯ ರಾಜಕಾರಣದ ಗ್ರಹಣ ಬಡಿದಿದೆ. ಇತ್ತೀಚಿನ ರಾಷ್ಟ್ರೀಯ ನಾಯಕರ ತೀರ್ವನಗಳಿಂದಾಗಿ ಅವರೆಲ್ಲ ಬರಿಗೈಲಿ ಉಳಿಯುವಂತಾಗಿದೆ. ಅನಿರೀಕ್ಷಿತ ಬೆಳವಣಿಗೆ ಹೊರತುಪಡಿಸಿ ಚುನಾವಣೆಗಳು ಇನ್ನೆರಡು ವರ್ಷವಂತೂ ಇಲ್ಲ. ಹೀಗಾಗಿ ವಿ.ಎಸ್.ಉಗ್ರಪ್ಪ, ಎಚ್.ವಿಶ್ವನಾಥ್, ಮುದ್ದಹನುಮೇಗೌಡ, ರೋಷನ್ ಬೇಗ್, ರಾಜೀವ್ ಗೌಡ, ಎಚ್.ಎಂ.ರೇವಣ್ಣ, ಐವಾನ್ ಡಿಸೋಜಾ, ಬಿ.ಬಿ.ಚಿಮ್ಮನಕಟ್ಟಿ, ರಮೇಶ್ ಕತ್ತಿ, ಕೆ.ಎಚ್.ಮುನಿಯಪ್ಪ ಸೇರಿ ಹತ್ತಾರು ಮಂದಿ ಜನಪ್ರತಿನಿಧಿ ಎನಿಸಿಕೊಳ್ಳಲು ಸದ್ಯಕ್ಕಂತೂ ಅವಕಾಶ ಕಾಣಿಸುತ್ತಿಲ್ಲ. ಹಾಗೆಂದು ಅವರು ಸುಮ್ಮನೆ ಕೂರುವಂತೆಯೂ ಇಲ್ಲ. ಮುಂದಿನ ಚುನಾವಣೆವರೆಗೂ ವರ್ಚಸ್ಸು ಕಾಪಿಟ್ಟುಕೊಳ್ಳಲು ಜನರ ಮಧ್ಯೆ ಬರಿಗೈಲಿ ಬೆವರು ಹರಿಸಲೇ ಬೇಕಾದ ಪರಿಸ್ಥಿತಿ ಇದೆ. ಬೆಂಬಲಿಗರು, ಅನುಯಾಯಿಗಳು ಕೈಬಿಟ್ಟು ಹೋಗದಂತೆ ಜತನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net