

ಅಗರ್ತಲಾ: ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಸ್ಥಾಪನೆ ಮಾಡಿಕೊಂಡು ಬಂದಿದೆ. ಆದರೆ ಅದರ ಆಡಳಿತ ರಾಷ್ಟ್ರಕ್ಕೆ ಸೀಮಿತವಾಗದೆಯೇ ವಿದೇಶಗಳಿಗೂ ಪಸರಿಸಲಿದೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ದೇಬ್ ಹೇಳಿದ್ದಾರೆ.
ಭಾನುವಾರದಂದು ರಾಜಧಾನಿ ಅಗರ್ತಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು ಈ ಮಾತನ್ನು ಹೇಳಿದ್ದಾರೆ. ಭಾರತದಲ್ಲಿ ಅಧಿಕಾರ ವಹಿಸಿಕೊಂಡು ಸುಮ್ಮನಾಗುವವರು ನಾವಲ್ಲ. ನೇಪಾಳ ಮತ್ತು ಶ್ರೀಲಂಕಾದಲ್ಲೂ ನಮ್ಮ ಪಕ್ಷದ ಆಡಳಿತಕ್ಕೆ ಬರುವಂತೆ ಮಾಡುವ ಯೋಜನೆಯನ್ನು ನಮ್ಮ ಗೃಹ ಸಚಿವರಾದ ಅಮಿತ್ ಷಾ ಅವರು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ಅಮಿತ್ ಷಾ ಅವರೊಂದಿಗಿನ ಭೇಟಿಯನ್ನು ಬಿಪ್ಲಾಬ್ ದೇಬ್ ನೆನಪಿಸಿಕೊಂಡಿದ್ದಾರೆ. ಆಗ ಅಮಿತ್ ಷಾ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅವರೊಂದಿಗೆ ಸಭೆ ನಡೆಸಲಾಗಿತ್ತು. ನೇಪಾಳ ಮತ್ತು ಶ್ರೀಲಂಕಾದಲ್ಲಿ ಬಿಜೆಪಿಯ ಅಧಿಕಾರವನ್ನು ವಿಸ್ತರಿಸುವ ಯೋಜನೆಯ ಬಗ್ಗೆ ಅಂದು ಅವರು ನಮ್ಮೊಂದಿಗೆ ಚರ್ಚೆ ನಡೆಸಿದ್ದರು ಎಂದು ಮುಖ್ಯಮಂತ್ರಿಗಳು ನುಡಿದಿದ್ದಾರೆ. (ಏಜೆನ್ಸೀಸ್)