

ಕೇಂದ್ರ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ ರಾಜಕೀಯ ದಾಳ ಉರುಳಿಸಿದ್ದ ಆಡಳಿತಾರೂಢ ಕಾಂಗ್ರೆಸ್ಗೆ ಪ್ರತಿಯಾಗಿ ಪ್ರತಿಪಕ್ಷ ಬಿಜೆಪಿಯು ‘ಕೇಂದ್ರವನ್ನು ದೂಷಿಸುವ ಪ್ರವೃತ್ತಿ ಕೈಬಿಡಬೇಕೆಂದು ಒತ್ತಾಯಿಸುತ್ತೇವೆ’ ಎಂದು ಪ್ರತಿನಿರ್ಣಯ ಪ್ರಸ್ತಾಪಿಸಿ ತಿರುಗೇಟು ನೀಡಿದೆ.
ಶುಕ್ರವಾರ ವಿಧೇಯಕದ ಪರ್ಯಾಲೋಚನೆ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ನಿರ್ಣಯ ಓದಿದರು. ಅದನ್ನು ಕಲಾಪದ ಕಡತದಲ್ಲಿ ನಮೂದಾಗುವಂತೆಯೂ ನೋಡಿಕೊಂಡರು. ದಿನದ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಮುಂದೆ ಧರಣಿ ನಡೆಸಿ, ಗುರುವಾರ ಸರ್ಕಾರ ಏಕಪಕ್ಷೀಯವಾಗಿ ಕೈಗೊಂಡ ಕೇಂದ್ರ ಸರ್ಕಾರದ ವಿರುದ್ಧದ ನಿರ್ಣಯ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಘೋಷಣೆಗಳನ್ನೂ ಹಾಕಿ ಕಲಾಪಕ್ಕೆ ಅಡ್ಡಿಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ, ನಿರ್ಣಯ ಕುರಿತು ಕಾರ್ಯಕಲಾಪ ಪಟ್ಟಿಯಲ್ಲಿ ನಮೂದಿಸದೆ, ಸಲಹಾ ಸಮಿತಿ ಸಭೆಯಲ್ಲೂ ಪ್ರಸ್ತಾಪಿಸದೆ ರಾಜಕೀಯ ಕಾರಣಕ್ಕೆ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ತರಲಾಗಿದೆ. ಇದು ಸರ್ಕಾರದ ಹೇಡಿತನ. ಕದ್ದುಮುಚ್ಚಿ ನಿರ್ಣಯ ತರುವ ಅಗತ್ಯವೇನಿತ್ತು? ಚರ್ಚೆಗೂ ಅವಕಾಶ ನೀಡದೆ ಇಡೀ ಸದನಕ್ಕೆ ಅಗೌರವ ತರುವಂತೆ ಸರ್ಕಾರ ನಡೆದುಕೊಂಡಿದೆ. ವಿಧಾನಸಭೆಯ ನಿಯಮಾವಳಿ ಗಾಳಿಗೆ ತೂರಲಾಗಿದೆ. ಕೂಡಲೇ ನಿರ್ಣಯ ವಾಪಸ್ ಪಡೆದು ನಿಯಮಾವಳಿ ಪ್ರಕಾರ ಮಂಡಿಸಿ ಎಂದು ಆಗ್ರಹಿಸಿದರು.
ರಾಜ್ಯ- ಕೇಂದ್ರ ಸರ್ಕಾರ ಜೋಡೆತ್ತಿನಂತೆ ಕೆಲಸ ಮಾಡಬೇಕು. ಬಜೆಟ್ ಪುಸ್ತಕದಲ್ಲೇ ಕೇಂದ್ರದ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದೀರಿ. ಇದರಿಂದ ಸಿದ್ದರಾಮಯ್ಯಗೆ ತೊಂದರೆಯಾಗಲ್ಲ, ರಾಜ್ಯದ ಏಳೂವರೆ ಕೋಟಿ ಜನರಿಗೆ ತೊಂದರೆಯಾಗುತ್ತದೆ ಎಂದರು.
ಈ ಮಾತಿಗೆ ಪ್ರತಿಯಾಗಿ ಕಾನೂನು ಸಚಿವ ಎಚ್.ಕೆ. ಪಾಟೀಲ್ ಪ್ರತಿಕ್ರಿಯಿಸಿ ಕರ್ನಾಟಕ ಹಿತರಕ್ಷಣೆ ಅಂಶ ಮಾತ್ರ ನಿರ್ಣಯದಲ್ಲಿದೆ. ಅಂಕಿ-ಅಂಶಗಳ ಸ್ಪಷ್ಟತೆ ಇದೆ. ಅವಮಾನದ ಅಂಶಗಳಿಲ್ಲ, ಪ್ರತಿಪಕ್ಷದ ಆರೋಪವನ್ನು ತಳ್ಳಿ ಹಾಕುತ್ತೇವೆ ಮತ್ತು ಖಂಡಿಸುತ್ತೇವೆ ಎಂದರು.
ಈ ವೇಳೆ ಪ್ರತಿಪಕ್ಷ ಸದಸ್ಯರು ತೀವ್ರ ವಾಗ್ವಾದಕ್ಕಿಳಿದ ಕಾರಣ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಎಚ್.ಕೆ ಪಾಟೀಲ್, ನಿರ್ಣಯಕ್ಕೆ ನಿಮ್ಮ ಪರವಾನಗಿ ಬೇಡ. ಕಾಯ್ದೆ, ನಿಯಮಾವಳಿ ಪ್ರಕಾರವೇ ನಿರ್ಣಯ ಮಾಡಿದ್ದೇವೆ. ಇದು ಏಳು ಕೋಟಿ ಕನ್ನಡಿಗರ ಧ್ವನಿ, ನೀವು ಒಪ್ಪಿಕೊಳ್ಳಿ, ಆತ್ಮಾವಲೋಕನ ಮಾಡಿ. ನಿಮಗೆ ಕರ್ನಾಟಕದ ಹಿತಾಸಕ್ತಿ ಮುಖ್ಯವೋ, ರಾಜಕೀಯ ಮುಖ್ಯವೋ ಎಂದು ಮಾತಲ್ಲೇ ಚುಚ್ಚಿದರು.
ಈ ಮಾತು ಬಿಜೆಪಿ ಸದಸ್ಯರ ತಾಳ್ಮೆ ಕಳೆಯಿತು. ಲೋಕಸಭೆ ಚುನಾವಣೆ ಎದುರಿಸಲು ಸಾಧ್ಯವಾಗದೇ ರಾಜಕೀಯ ಮಾಡುತ್ತಿದ್ದೀರಿ, ಧಮ್ಮು, ತಾಕತ್ತು ಇದ್ದರೆ ಎಲ್ಲಿ ಕೇಳಬೇಕೋ ಅಲ್ಲಿ ಕೇಳಿ, ಲೋಕಸಭೆಯಲ್ಲಿ ಮಾತನಾಡಿ ಎಂದು ತಿರುಗೇಟು ನೀಡಿದರು. ಇತ್ತ ಧರಣಿಯಲ್ಲಿದ್ದ ಶಾಸಕರು, ‘ಜಮೀರಣ್ಣನ ಬಜೆಟ್’, ‘ಬೋಗಸ್ ಬಜೆಟ್’, ‘ಹಿಂದೂ ವಿರೋಧಿ ಬಜೆಟ್’, ‘ಕಮೀಷನ್ ಸರ್ಕಾರ’ ಎಂದು ಘೋಷಣೆ ಹಾಕುತ್ತಲೇ ಇದ್ದರು. ಬಜೆಟಲ್ಲಿ ಏನಿಲ್ಲ, ಬಜೆಟಲ್ಲಿ ಏನಿಲ್ಲ ಎಂದು ಹಾಡನ್ನೂ ಹಾಡಿದರು.
ಬಿಜೆಪಿ ನಿರ್ಣಯದ ಸಾರ
1. ಭಾರತ ಪ್ರಜಾಸತ್ತಾತ್ಮಕ ದೇಶವಾಗಿ 75 ವರ್ಷ ಕಳೆದಿದೆ, ಅಧಿಕವಾಗಿ ಆಡಳಿತ ಮಾಡಿರುವುದು ಕಾಂಗ್ರೆಸ್. ಹಲವಾರು ವರ್ಷ ರಾಜ್ಯಗಳ ತೆರಿಗೆ ಪಾಲು ಕೇವಲ ಶೇ.20ರಷ್ಟು ಕೊಟ್ಟಿದ್ದು ಶೇ.30ಕ್ಕೆ ಹೆಚ್ಚಿಸಲು ಸುದೀರ್ಘ ಹೋರಾಟ ಮಾಡಬೇಕಾಯಿತು. ಶೇ.30ರಿಂದ ಶೇ.40ಕ್ಕೆ ಏರಿಕೆ ಮಾಡುವ ಬೇಡಿಕೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಲು ನಿರಾಕರಿಸಿತ್ತು. ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚಿನ ಪಾಲು ಕೊಡದ ಯುಪಿಎ ಸರ್ಕಾರದ ವಿರುದ್ಧ ಚಕಾರ ಎತ್ತದ ರಾಜ್ಯ ಕಾಂಗ್ರೆಸ್ ಕೇವಲ ರಾಜಕಾರಣಕ್ಕಾಗಿ ಈ ವಿಷಯ ಪ್ರಸ್ತಾಪಿಸಿದ್ದಾರೆ.
2. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ತೆರಿಗೆ ಪಾಲು ಕೊಡುವ ಬಹಳ ದಿನಗಳ ಬೇಡಿಕೆ ಶೇ.32ರಿಂದ ಶೇ.42ಕ್ಕೆ ಏರಿಸಿರುವುದು ಎನ್ಡಿಎ ಸರ್ಕಾರದ ಕಾಳಜಿ ತೋರಿಸುತ್ತದೆ. ಹಣಕಾಸು ಆಯೋಗಗಳ ಶಿಫಾರಸಿನಂತೆ ರಾಜ್ಯಗಳಿಗೆ ಹಣಕಾಸು ಹಂಚಿಕೆ ಮಾಡಬೇಕಾಗುತ್ತದೆ. ಅದನ್ನು ಎನ್ಡಿಎ ಸರ್ಕಾರ ಪಾಲಿಸಿದೆ. ರಾಜ್ಯ ಸರ್ಕಾರದ ತಾರತಮ್ಯದ ಆರೋಪ ಸಂಪೂರ್ಣ ಸುಳ್ಳಿನಿಂದ ಕೂಡಿದೆ.
3. 15ನೇ ಹಣಕಾಸಿನ ಕಾರ್ಯ ಪ್ರಾರಂಭಿಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು, ರಾಜ್ಯ ಸರ್ಕಾರದ ವಾಸ್ತವಿಕ ಅಂಶಗಳನ್ನು ಆಯೋಗಕ್ಕೆ ಮನದಟ್ಟು ಮಾಡಿಕೊಡಲು ವಿಫಲವಾಗಿದೆ. ಅಲ್ಲದೆ ಆಯೋಗದ ನಿರ್ಣಾಯಕ ಅಂತಿಮ ಸಭೆಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿದ್ದ ಕಾಂಗ್ರೆಸ್ನ ಐದು ಸಚಿವರು ಭಾಗವಹಿಸಿದ್ದು ಆ ಸಂದರ್ಭದಲ್ಲಿ ಯಾವುದೇ ಪ್ರತಿರೋಧ ವ್ಯಕ್ತಪಡಿಸದೆ ಮೌನ ವಹಿಸಿದ್ದರು. ಆಯೋಗದ ಹಂಚಿಕೆಯಂತೆ ಹಣಕಾಸು ಹಂಚಿಕೆ ಕಾರ್ಯ ಆರಂಭವಾಗಿ ಎರಡು ವರ್ಷಗಳ ಮೇಲಾಗಿದೆ. ಏನಾದರೂ ಮಾನದಂಡದಲ್ಲಿ ವ್ಯತ್ಯಾಸವಾಗಿ ಅನುದಾನ ಕಡಿತವಾಗಿದ್ದರೆ ಅದಕ್ಕೆ ಆವತ್ತಿನ ಕಾಂಗ್ರೆಸ್ ಸರ್ಕಾರವೇ ಕಾರಣ.
4. ಜಿಎಸ್ಟಿ ಪ್ರಕಾರ ಶೇ.14 ಆರ್ಥಿಕ ಬೆಳವಣಿಗೆ ಅನುಸಾರ 1,06,258 ಕೋಟಿ ರೂ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಪರಿಹಾರ ಕೊಟ್ಟಿದೆ. ಇದು 2022ಕ್ಕೆ ಅಂತಿಮಗೊಂಡಿದ್ದರೂ ರಾಜ್ಯ ಸರ್ಕಾರ 2023-24ನ್ನು ಸೇರಿಸಿ ಸುಳ್ಳು ಲೆಕ್ಕಾಚಾರವನ್ನು ಮುಂದಿಡುವ ಪ್ರಯತ್ನ ಮಾಡುತ್ತಿದೆ.
5. ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಹಲವು ಕಾರ್ಯಕ್ರಮಗಳು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಕೊಡುವ ವ್ಯವಸ್ಥೆಯನ್ನು ಕೇಂದ್ರ ಅನುಸರಿಸಿದೆ. ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸಹಾಯಧನ ಕಡಿತಗೊಂಡಿದೆ ಎಂಬ ಇನ್ನೊಂದು ಸುಳ್ಳನ್ನು ಹೇಳುತ್ತಿದೆ.
6. ಕೇಂದ್ರದಲ್ಲಿ ಸೆಸ್ ಮತ್ತು ಸರ್ಚಾರ್ಜ್ಗಳು ಕಾಂಗ್ರೆಸ್ ಸರ್ಕಾರದ ಕಾಲದಿಂದಲೂ ಇವೆ. ಕೆಲ ನಿರ್ದಿಷ್ಟ ಕಾರ್ಯಕ್ರಮಕ್ಕಾಗಿ ಈ ತೆರಿಗೆ ಹಾಕುವ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ. ನಮ್ಮ ರಾಜ್ಯಕ್ಕೆ 1,06,258 ಕೋಟಿ ರೂ. ಜಿಎಸ್ಟಿ ಪರಿಹಾರ ಬಂದಿದೆ. ಈ ಸತ್ಯವನ್ನು ಮರೆಮಾಚಿ ರಾಜ್ಯಕ್ಕೆ ಇನ್ನಷ್ಟು ಪಾಲು ಬರಬೇಕು ಎಂಬ ಬೇಡಿಕೆ ರಾಜಕೀಯ ಪ್ರೇರಿತವಾಗಿದೆ. ಕಾಲ್ಪನಿಕ ಹಾಗೂ ಅವೈಜ್ಞಾನಿಕ ಲೆಕ್ಕಾಚಾರ ಮಾಡಿ ದೊಡ್ಡ ಪ್ರಮಾಣದ ನಷ್ಟ ರಾಜ್ಯಕ್ಕೆ ಆಗಿದೆ ಎಂದು ಹೇಳುವುದು, ಕೇಂದ್ರವನ್ನು ದೂಷಿಸುವುದು ರಾಜಕಾರಣದಲ್ಲಿ ಅತಿ ದೊಡ್ಡ ಸುಳ್ಳಾಗಿದೆ.
7. ಅಭಿವೃದ್ಧಿ ಮತ್ತು ಕರ್ನಾಟಕದ ಪಾಲನ್ನು ನ್ಯಾಯಸಮ್ಮತವಾಗಿ ಪಡೆದುಕೊಳ್ಳಲು ನಾವೆಲ್ಲರೂ ಬದ್ಧತೆ ತೋರಿಸಬೇಕು. ಆದರೆ ಸುಳ್ಳು, ಕಾಲ್ಪನಿಕ ಮತ್ತು ರಾಜಕೀಯಪ್ರೇರಿತ ವಿಚಾರ, ವಾದ, ನಿರ್ಣಯಗಳನ್ನು ಖಂಡಿಸಲೇಬೇಕು.
8. ರಾಜ್ಯ ಸರ್ಕಾರ ತಂದ ಆರ್ಥಿಕತೆಯ ಬಗ್ಗೆ ನಿರ್ಣಯವನ್ನು ಖಂಡಿಸುತ್ತೇವೆ. ಅದಲ್ಲದೇ ರಾಜ್ಯ ಸರ್ಕಾರವು ತೆರಿಗೆ ಸಂಗ್ರಹ, ಹಂಚಿಕೆ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಅದನ್ನು ಮರೆಮಾಚಲು ಕೇಂದ್ರವನ್ನು ದೂಷಿಸುವ ಪ್ರವೃತ್ತಿಯನ್ನು ಕೈಬಿಡಬೇಕೆಂದು ಒತ್ತಾಯ ಮಾಡುತ್ತೇವೆ.