

ಕಮಲ ಪಡೆಗೆ ಜೆಡಿಎಸ್ ಬಲ | ಕೈ ಅಭ್ಯರ್ಥಿಗೆ ಸರ್ಕಾರವೇ ಆಸರೆ | ಕಳೆದ ಬಾರಿಯ ಎದುರಾಳಿಗಳೇ ಈ ಸಲವೂ ಸ್ಪರ್ಧೆ
| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಗಳೂರು ಪದವೀಧರ ಕ್ಷೇತ್ರವನ್ನು ಸುಪರ್ದಿಗೆ ತೆಗೆದುಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಶ್ರಮಹಾಕಿದರೆ, ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್ನೆರವು ಪಡೆದು ಸೆಣಸಾಡುತ್ತಿದೆ.ಬೃಹತ್ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕ್ಷೇತ್ರ ಹರಡಿಕೊಂಡಿದೆ. ಮೂವತ್ತಾರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 35-40 ಲಕ್ಷ ಪದವೀಧರರು ಇದ್ದರೂ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡವರು 1 ಲಕ್ಷ ಮಂದಿ ಮಾತ್ರ.
ಎರಡು ದಶಕದಿಂದೀಚೆಗೆ ಕ್ಷೇತ್ರ ಬಿಜೆಪಿ ಕೈ ತಪ್ಪಿಲ್ಲ, ಗೆಲುವಿನ ಅಂತರ ಏರಿಳಿತವಾದರೂ ಬಿಜೆಪಿ ಭದ್ರಕೋಟೆಯಾಗಿಯೇ ಉಳಿದಿದೆ. ಆದರೆ, ಈ ಬಾರಿ ಬಿಜೆಪಿಗೆ ನೀರು ಕುಡಿಸಲೇಬೇಕೆಂದು ಕಾಂಗ್ರೆಸ್ ಸಾಕಷ್ಟು ತಾಲೀಮು ನಡೆಸಿದೆ. ಕಳೆದ ಚುನಾವಣೆಯಲ್ಲಿ ಎದುರಾದವರೇ ಈ ಬಾರಿಯೂ ಮುಖಾಮುಖಿಯಾಗಿರುವುದು ವಿಶೇಷ. 16 ಮಂದಿ ಕಣದಲ್ಲಿದ್ದರೂ ಬಿಜೆಪಿ, ಕಾಂಗ್ರೆಸ್ ನಡುವೆಯೇ ಹಣಾಹಣಿ. ಬಿಜೆಪಿ ಅಭ್ಯರ್ಥಿಯಾಗಿ ಅ.ದೇವೇಗೌಡ ಎರಡನೇ ಅವಧಿಗೆ ಸ್ಪರ್ಧೆಗಿಳಿದಿದ್ದರೆ, ಕಾಂಗ್ರೆಸ್ನಿಂದ ರಾಮೋಜಿಗೌಡ ತೊಡೆತಟ್ಟಿದ್ದಾರೆ.
ನೋಂದಣಿಯೇ ಮುಖ್ಯ: ಈ ಚುನಾವಣೆ ಅಭ್ಯರ್ಥಿ ಆಧಾರಿತ. ಆರು ತಿಂಗಳು ಮುಂಚಿತವಾಗಿ ಆಕಾಂಕ್ಷಿಗಳು ಪದವೀಧರರನ್ನು ಹುಡುಕಿ ಮತದಾರರ ಪಟ್ಟಿಗೆ ಸೇರಿಸಲು ಶ್ರಮ ಹಾಕಿರುತ್ತಾರೆ. ಬಿಜೆಪಿ ಟಿಕೆಟ್ ಬಯಸಿದ್ದ 3 ಮಂದಿ ಪ್ರತ್ಯೇಕವಾಗಿ ನೋಂದಣಿ ಮಾಡಿಸಿದ್ದರು. ಇವರಲ್ಲಿ ಒಬ್ಬರಿಗೆ ಸ್ಪರ್ಧಿಸಲು ಅವಕಾಶ ಸಿಕ್ಕರೆ, ಒಬ್ಬರು ಹಿಂದೆ ಸರಿದರು, ಮತ್ತೊಬ್ಬರು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ನಲ್ಲಿ ಬಹಳಷ್ಟು ಮುಂಚಿತವಾಗಿ ಟಿಕೆಟ್ ಘೋಷಿಸಿದ್ದರಿಂದ ಆಕಾಂಕ್ಷಿಗಳೆಲ್ಲ ಆರಂಭದಲ್ಲೇ ತಣ್ಣಗಾದರು. ಈ ಕಾರಣಕ್ಕೆ ಪೈಪೋಟಿ ಅಥವಾ ಆಂತರಿಕ ಪ್ರತಿರೋಧ ಇಲ್ಲವಾಯಿತು. ರಾಮೋಜಿಗೌಡರು ನಿರಾತಂಕವಾಗಿ ನೋಂದಣಿ ಮಾಡಿಸಿಕೊಂಡು ಸಾಗಿದರು. ಇದೀಗ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೋಂದಣಿ ಮಾಡಿಸಿದವರನ್ನು ಮತದಾನ ಕೇಂದ್ರಕ್ಕೆ ಕರೆಸುವುದಷ್ಟೇ ಸವಾಲು. ಈ ಹಿಂದಿನ ಚುನಾವಣೆಗಳಲ್ಲಿ ಮತದಾನ ಪ್ರಮಾಣ ತೀರಾ ಕಡಿಮೆ ಇದ್ದು, ಅಭ್ಯರ್ಥಿಗಳಲ್ಲಿ ಚಿಂತೆ ಕಾಡುತ್ತಲೇ ಇದೆ.
ಕಣದಲ್ಲಿರುವ ಹುರಿಯಾಳುಗಳು: ಅ.ದೇವೇಗೌಡ- ಬಿಜೆಪಿ, ರಾಮೋಜಿಗೌಡ- ಕಾಂಗ್ರೆಸ್, ಜೆ.ಜೀವನ್- ಕರ್ನಾಟಕ ರಾಷ್ಟ್ರ ಸಮಿತಿ, ಸಂತೋಷ್- ಉತ್ತಮ ಪ್ರಜಾಕೀಯ ಪಕ್ಷ, ಇತರರು: ಅಭಿಷೇಕ ಬ್ರರ್ಹ¾, ಆರ್.ಎಸ್.ಉದಯ್ಸಿಂಗ್, ಎಂ.ಪಿ.ಕರಬಸಪ್ಪ, ಆರ್.ಕಾಂತಕುಮಾರ್, ನೀಲಕಂಠ ಆರ್.ಗೌಡ, ಎಂ.ಪುಟ್ಟಸ್ವಾಮಿ, ಲಾರೆನ್ಸ್, ಡಾ.ಎ.ಎಸ್. ಬಾನುಪ್ರಕಾಶ್, ಡಾ. ಎಂ.ಜಿ.ಮುನಿರಾಜು, ವಿ.ಮಂಜುನಾಥ, ಈರಪ್ಪ ವಸಂತಕುಮಾರ್.
ರಾಜಕೀಯ ಲೆಕ್ಕಾಚಾರ: ಇದು ಅಭ್ಯರ್ಥಿ ಚುನಾವಣೆಯಾಗಬಾರದು, ಪಕ್ಷದ ಚುನಾವಣೆಯಾಗಬೇಕು, ಪಕ್ಷದ ಪದಾಧಿಕಾರಿಗಳು, ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಫರ್ವನು ಹೊರಡಿಸಿತ್ತು. ಹೀಗಾಗಿ ಕಾಂಗ್ರೆಸ್ ಪಾಳಯ ಗಂಭೀರವಾಗಿ ತೆಗೆದುಕೊಂಡಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಭ್ಯರ್ಥಿಯೊಂದಿಗೆ ಮತಯಾಚಿಸುತ್ತಿದ್ದಾರೆ. ಇದು ಸಹಜವಾಗಿ ಅಭ್ಯರ್ಥಿಗೆ ಅನುಕೂಲಕರ ಎಂಬ ವಾತಾವರಣವಿದೆ. ಜತೆಗೆ ಕೆಪಿಸಿಸಿ ತನ್ನ ಪದವೀಧರ ಕೋಶವನ್ನು ಸಕ್ರಿಯಗೊಳಿಸಿ ಪಕ್ಷದ ವಕ್ತಾರ ನಟರಾಜಗೌಡರಿಗೆ ಅಧ್ಯಕ್ಷ ಸ್ಥಾನ ನೀಡಿದೆ. ಈ ಮುಖೇನ ಪಕ್ಷದ ಕಡೆಯಿಂದ ಸಂಘಟನಾತ್ಮಕ ಕೆಲಸ ಚುರುಕಾಗುವಂತೆ ಮಾಡಿದೆ. ಅದೇ ರೀತಿ ಬಿಜೆಪಿ ಉರುಳಿಸಿದ ದಾಳವೊಂದು ಕಾಂಗ್ರೆಸನ್ನು ಕಂಗಾಲು ಮಾಡಿದೆ. ರಾಮೋಜಿಗೌಡ ಒಕ್ಕಲಿಗರಲ್ಲ, ಮರಾಠಿಗರು ಎಂದು ಪ್ರಚಾರ ಸಭೆಯಲ್ಲಿ ಹೇಳಿದ್ದರು. ಅದು ಕ್ಷೇತ್ರದ ತುಂಬೆಲ್ಲ ಪಸರಿಸಿದ್ದು, ಇದನ್ನು ಸರಿಪಡಿಸಿಕೊಳ್ಳಲು ಕಾಂಗ್ರೆಸ್ ಸಾಹಸಪಡುತ್ತಿದೆ. ಬಿಜೆಪಿ ವಿಚಾರಕ್ಕೆ ಬಂದರೆ ಸಂಘಟನೆ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿಲ್ಲ ಎಂಬ ಮಾತು ಕೇಳಿಬಂದಿದೆ. ಪಕ್ಷದ ಮುಖಂಡರು ಇತರ ಕ್ಷೇತ್ರಕ್ಕೆ ನೀಡಿದ ಆದ್ಯತೆ ಬೆಂಗಳೂರಲ್ಲಿ ನೀಡಿಲ್ಲ ಎಂಬ ಮಾತಿದೆ. ಎರಡು ದಿನಗಳ ಹಿಂದೆ ಜೆಡಿಎಸ್ ಕಚೇರಿಯಲ್ಲಿ ಮೈತ್ರಿ ಸಮನ್ವಯ ಸಭೆ ನಡೆದಿದ್ದು, ಜೆಡಿಎಸ್ ನಾಯಕರು ಪೂರ್ಣ ಪ್ರಮಾಣದಲ್ಲಿ ಬೆಂಬಲದ ಮಾತನಾಡಿ ಸಂದೇಶ ಕಳಿಸಿರುವುದು ಅಭ್ಯರ್ಥಿಗೆ ಆನೆ ಬಲ ತಂದುಕೊಟ್ಟಿದೆ. ಉಳಿದಂತೆ ಪಕ್ಷೇತರ ಅಭ್ಯರ್ಥಿ ಆರ್.ಎಸ್.ಉದಯ್ಸಿಂಗ್ ಸಕ್ರಿಯವಾಗಿದ್ದು, ಬಿಜೆಪಿಗೆ ತೊಡರಾಗುವ ಲಕ್ಷಣ ಕಾಣಿಸಿದೆ.
ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ: ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಂದು ಕೆಲ ದಶಕವೇ ಕಳೆಯಿತು. ಈಗಲೂ ಅದೇ ವಿಶ್ವಾಸದಲ್ಲಿ ಬಿಜೆಪಿ ಇದೆ. ಅ.ದೇವೇಗೌಡ ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕ್ಷೇತ್ರದ ಆಳ-ಅಗಲ ಅರಿತಿದ್ದಾರೆ. ಜೆಡಿಎಸ್ ಮೈತ್ರಿ ಕಾರಣದಿಂದ ಬಲ ಹೆಚ್ಚಾಗಿದೆ. ಆದರೆ ತಮಗೂ ಚುನಾವಣೆಗೂ ಸಂಬಂಧವೇ ಇಲ್ಲವೆಂಬಂತೆ ಬಿಜೆಪಿ ಶಾಸಕರು ದೂರ ಉಳಿದಿರುವುದು ಮೈನಸ್ ಪಾಯಿಂಟ್.
ಕಾಂಗ್ರೆಸ್ ಸಂಘಟಿತ ಶ್ರಮ: ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಸಂಘಟಿತ ಶ್ರಮ ಹಾಕುತ್ತಿದೆ. ಮತದಾರರ ವೈಯಕ್ತಿಕ ಬೇಟಿಗೆ ಆದ್ಯತೆ ನೀಡಿದೆ. ಕಳೆದ ಬಾರಿ ಸೋಲಿನ ಅನುಕಂಪ ಈ ಬಾರಿ ತಕ್ಕಮಟ್ಟಿಗೆ ಕೆಲಸ ಮಾಡಬಹುದೆಂಬ ಆಶಯ ಇಟ್ಟುಕೊಂಡಂತಿದೆ. ಕಾಂಗ್ರೆಸ್ ಅಧಿಕಾರದಲ್ಲಿದೆ, ಇದು ಅಭ್ಯರ್ಥಿ ಮೇಲೆ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ಇದೆ. ಮತದಾನ ಪ್ರಮಾಣ ಹೆಚ್ಚಿಸಿಕೊಳ್ಳದೇ ಹೋದರೆ ಪ್ರಯತ್ನ ಫಲ ಕೊಡಲ್ಲ. ಲೋಕಸಭೆ ಗುಂಗಿನಲ್ಲಿರುವ ಮತದಾರರನ್ನು ಕಾಂಗ್ರೆಸ್ ಪರ ನಿಲ್ಲುವಂತೆ ಮಾಡುವ ಸವಾಲು ಇದೆ.