ಬಿಜೆಪಿ ರಾಜ್ಯ ಕಾರ್ಯಕಾರಿಣಿ ಜಾತಿ, ಹಣ, ಪ್ರಭಾವ ಮುಖ್ಯವಲ್ಲ; ಶಿಸ್ತಿನ ಸಮರ್ಪಣ ಮನೋಭಾವವೇ ಮುಖ್ಯ ಎಂದ ವಿಜಯೇಂದ್ರ

byv
Published on

ಬೆಂಗಳೂರು:
ಪಕ್ಷದಲ್ಲಿ ಶಿಸ್ತು ಮತ್ತು ಸಮರ್ಪಣಾ ಮನೋಭಾವವೇ ಪ್ರಧಾನವೇ ಹೊರತು, ಜಾತಿ, ಹಣ, ಪ್ರಭಾವವಲ್ಲ. ಇದ್ಯಾವುದು ಇನ್ನು ಮುಂದೆ ಯಾವುದೂ ನಡೆಯುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಇಷ್ಟು ಬಾರಿ ಸ್ಪರ್ಧಿಸಿದೆ, ಅಷ್ಟು ಬಾರಿ ಗೆದ್ದೆ ಎನ್ನುವುದು ಅಪ್ರಸ್ತುತವಾಗಿದ್ದು, ಕಾರ್ಯಕರ್ತರ ಅಭಿಪ್ರಾಯದಂತೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದರು.
ಜನರ ಅಭಿಪ್ರಾಯಗಳೇ ಪಕ್ಷದ ಕಾರ್ಯಕರ್ತರ ಅಭಿಲಾಷೆಯಾಗಿರುತ್ತದೆ. ಇದಕ್ಕಾಗಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ತೀವ್ರತರವಾಗಿ ನಡೆದಿದೆ ಎಂದು ಹೇಳಿದರು.
ರಾಜ್ಯದ 28 ಲೋಕಸಭೆ ಕ್ಷೇತ್ರಗಳನ್ನು ಗೆದ್ದು ಕೊಡಬೇಕು ವರಿಷ್ಠರು ಟಾಸ್ಕ್ ನೀಡಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯತತ್ಪರವಾಗಬೇಕು. ಟಾಸ್ಕ್ ಸಾಧಿಸುವ ಛಲ, ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಎದುರಾಳಿಗಳ ಬಗ್ಗೆ ಕಡಿಮೆ ಅಂದಾಜು ಅಥವಾ ಎದೆಗುದಿಯಿಲ್ಲದೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು

ನಾನೆ ಅಂತಿಮವಲ್ಲ
ಪಕ್ಷದಲ್ಲಿ ನಾನೇ ಅಂತಿಮವಲ್ಲ. ಈಗಿನ ಸಂದರ್ಭಕ್ಕೆ ಅನುಗುಣವಾಗಿ ನನಗೆ ಈ ಜವಾಬ್ದಾರಿ ನೀಡಿದ್ದಾರೆ. ಮುಂದೆ ಬೇರೆಯವರಿಗೂ ಅವಕಾಶ ಸಿಗಬಹುದು. ನಾನೇ ಅಲ್ಟಿಮೇಟ್ ಎಂಬ ಭಾವ, ಆಲೋಚನೆ ಯಾರಿಗೂ ಬೇಡ ಎಂದು ಹೇಳಿದರು.

ಟಾರ್ಗೆಟ್ ಮಾಡಲಾರೆ
ನನ್ನ ಜವಾಬ್ದಾರಿ ನಿರ್ವಹಣೆಯಲ್ಲಿ ಓರೆಕೋರೆ, ಲೋಪ ಕಂಡು ಬಂದರೆ ಅದನ್ನು ನೇರವಾಗಿ ತಿದ್ದಿಕೊಳ್ಳುವೆ. ಪಕ್ಷದ ಹಿತವೇ ಮುಖ್ಯ. ತಪ್ಪು ಎತ್ತಿ ತೋರಿಸುವವರನ್ನು ನಾನೆಂದೂ ಟಾರ್ಗೆಟ್ ಮಾಡುವುದಿಲ್ಲ ಎಂದು ಕಿವಿ ಮಾತು ಹೇಳಿದರು.

ಎದುರಾಳಿಗಳನ್ನು ಹಗುರವಾಗಿ ನೋಡಬೇಡಿ
ಚುನಾವಣಾ ಸಮಯವಾದ್ದರಿಂದ ನಮ್ಮ ಎದುರಾಳಿಗಳನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಲೋಕಸಭಾ ಚುನಾವಣೆ ಆಗುವವರೆಗೂ ವಿಶ್ರಾಂತಿ ಪಡೆಯುವ, ಮನೆಯಲ್ಲಿ ಕುಳಿತುಕೊಳ್ಳಬಾರದು ಎಂದರು.
ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಆಗಿರುವ ಸಂದರ್ಭದಲ್ಲಿ ಕೋಟ್ಯಂತರ ಹಿಂದೂಗಳು ಕುಣಿದು ಕುಪ್ಪಳಿಸುವ ವಾತಾವರಣ ದೇಶದೆಲ್ಲೆಡೆ ನಿರ್ಮಾಣವಾಗಿದೆ.
ಕಳೆದ ಒಂಬತ್ತೂವರೆ ವರ್ಷಗಳಲ್ಲಿ ನಡೆಸಿದ ಆಡಳಿತ ಮತ್ತು ಸಾಧನೆ ಮುಂದಿಟ್ಟುಕೊಂಡು, ಹಗಲು ರಾತ್ರಿ ಪಕ್ಷದ ಗೆಲುವಿಗಾಗಿ ಶ್ರಮಿಸುವಂತೆ ಕರೆ ನೀಡಿದರು.
ಒಂದು ದಿನವೂ ವಿಶ್ರಾಂತಿಯನ್ನು ತೆಗೆದುಕೊಳ್ಳದೆ, ಪ್ರಧಾನಿ ದುಡಿಯುತ್ತಿದ್ದಾರೆ. ದೇಶ ಅಭಿವೃದ್ಧಿಗೆ ಅವರ ಕೊಡುಗೆ ಬಹಳಷ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಪಡಿಸಿದರೆ ಅಲ್ಲೋಲ ಕಲ್ಲೋಲ ಆಗಲಿದೆ ಎಂದು ಬಿಂಬಿಸುವ ಕೆಲಸ ಕಾಂಗ್ರೆಸ್‌ನಿಂದ ಆಗಿತ್ತು. ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರ ದಿಟ್ಟ ನಾಯಕತ್ವದಿಂದ ಆರ್ಟಿಕಲ್ 370 ರದ್ದು ಮಾಡಿದ್ದು ಮಹತ್ವದ ನಿರ್ಧಾರ ಎಂದರು.
ರಾಮಮಂದಿರ ಪ್ರತಿಷ್ಠಾಪನೆಗೆ ರಾಜ್ಯದ ಕಾಂಗ್ರೆಸ್ಸಿನವರು ಆಮಂತ್ರಣ ಬಂದಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದರೆ, ಕೇಂದ್ರದ ಕಾಂಗ್ರೆಸ್ ಮುಖಂಡರು ಆಮಂತ್ರಣ ಧಿಕ್ಕರಿಸಿ ಅಯೋಧ್ಯೆಗೆ ಹೋಗುವುದಿಲ್ಲ ಎಂದು ತೀರ್ಮಾನ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದರು.
ಸರ್ಕಾರ ಬಂದು 8 ತಿಂಗಳಾದರೂ ಶಾಂತಿ ವಾತಾವರಣ ಇಲ್ಲ. ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬರ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದರು.

ಹಾಜರಿದ್ದವರು:
ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, ಪ್ರಲ್ಹಾದ್ ಜೋಶಿ, ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ನಿಕಟಪೂರ್ವ ಅಧ್ಯಕ್ಷರು, ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.

ಗೈರಾದವರು:
ಮೊದಲ ಬಿಜೆಪಿ ಕಾರ್ಯಕಾರಿಣಿಗೆ ನಿರೀಕ್ಷೆಯಂತೆಯೇ ಶಾಸಕರಾದ ಬಸನಗೌಡ ಯತ್ನಾಳ್, ಎಸ್.ಟಿ.ಸೋಮಶೇಖರ್, ರಮೇಶ್ ಜಾರಕಿಹೊಳಿ, ಶಿವರಾಂ ಹೆಬ್ಬಾರ್, ಮಾಜಿ ಸಚಿವ ವಿ.ಸೋಮಣ್ಣ ಅವರು ಗೈರು ಹಾಜರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net