

ಬೆಂಗಳೂರು: ಕೇಂದ್ರದ 29 ಸಚಿವರಿಗೆ ಅಪರಾಧ ಹಿನ್ನೆಲೆ ಇದೆ. ಶೇ.40 ರಷ್ಟು ಸಚಿವರ ವಿರುದ್ಧ ಅಪರಾಧ ಆರೋಪಗಳಿವೆ. ಇಂಥ ಬಿಜೆಪಿಯವರರು ಯಾವ ಬಾಯಿಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೇಳುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.
ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಸಂಪುಟ ಸಚಿವರ ಮೇಲೆ ರೇಪ್, ಮರ್ಡರ್ ಮಾಡಿದ ಆರೋಪಗಳಿವೆ. ಬಿಜೆಪಿಯವರು ಮುಡಾ ಪ್ರಕರಣ ಹಿಡಿದುಕೊಂಡಿದ್ದಾರೆ, ಯಾಕೆ ಅವರಿಗೆ ಚುನಾವಣಾ ಬಾಂಡ್ ಹಗರಣ ಕಾಣುವುದಿಲ್ಲ ಎಂದು ಕೆಣಕಿದರು.
ಸುಪ್ರೀಂಕೋರ್ಟ್ ಸಹ ಚುನಾವಣಾ ಬಾಂಡ್ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಅವರು ಚುನಾವಣಾ ಬಾಂಡ್ ಹಗರಣದಲ್ಲೂ ತನಿಖೆ ಆಗಲಿ ಅಂತ ಆಗ್ರಹಿಸಲಿ. ಚುನಾವಣಾ ಬಾಂಡ್ ಅಕ್ರಮ 8,500 ಕೋಟಿ ಆಗಿದೆ. ಇದಕ್ಕೆ ಮೋದಿಯವರು ರಾಜೀನಾಮೆ ಕೊಡಬೇಕಲ್ಲವೆ ಎಂದು ಪ್ರಶ್ನಿಸಿದರು.
ಮುಡಾ ಬಿಟ್ಟರೆ ಅವರಿಗೆ ಮಾತಾಡಲು ಬೇರೇನೂ ಇಲ್ಲ. ಬೆಳಗ್ಗೆ ರಾತ್ರಿ ಎಲ್ಲ ಮುಡಾ ಮುಡಾ ಅಂತಿದ್ದಾರೆ. ನಾವೇನೇ ಮಾಡಿದರೂ ಮುಡಾ ಪ್ರಕರಣ ಡೈವರ್ಟ್ ಮಾಡಲು ಮಾಡುತ್ತಿದ್ದಾರೆ ಎನ್ನುತ್ತಾರೆ ಎಂದು ತಿರುಗೇಟು ನೀಡಿದರು.
ನಮ್ಮಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಅವರು ಬೇರೆ ವಿಚಾರಕ್ಕೆ ಭೇಟಿ ಆಗಿರಬಹುದು. ಎಐಸಿಸಿ ನಾಯಕರು ರಾಜ್ಯಕ್ಕೆ ಬರಲಿ ಬಂದು ರಿವೀವ್ ಮಾಡಲಿ. ಮಾಡಿದರೆ ನಮಗೂ ಒಳ್ಳೆಯದೆ ಎಂದರು.
ದಸರಾ ಉದ್ಘಾಟನೆ ವೇಳೆ ಸಿಎಂ ಅವರಿಂದ ಒಂದು ವರ್ಷದ ಅವಧಿಗೆ ಆಶೀರ್ವಾದ ಕೋರಿಕೆ ಕುರಿತ ಪ್ರಶ್ನೆಗೆ, ಅದರ ಬಗ್ಗೆ ಗೊತ್ತಿಲ್ಲ, ಬಾಯಿ ತಪ್ಪಿ ಹೇಳಿದ್ದಾರೋ ಏನೋ ಗೊತ್ತಿಲ್ಲ. ಕುಮಾರಸ್ವಾಮಿ ಮೇಲೆ ಎ್ಐಆರ್ ಹಾಕಿದರೆ ಅದು ರಾಜಕೀಯ ದುರುದ್ದೇಶ. ಅದೇ ಬೇರೆಯವರಿಗೆ ಆದರೆ ಅದು ರಾಜಕೀಯ ದುರುದ್ದೇಶ ಅಲ್ಲವಾ? ಎಂದು ಸಂತೋಷ್ ಲಾಡ್ ಪ್ರಶ್ನೆ ಮಾಡಿದರು.