

ಬೆಂಗಳೂರು: ಮುಡಾ ಹಗರಣ ವಿರೋಧಿಸಿ ವಿಧಾನಮಂಡಲದಲ್ಲಿ ತೀವ್ರ ಹೋರಾಟ ಮಾಡಿದ್ದ ಬಿಜೆಪಿ ಈಗ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಉದ್ದೇಶಿಸಿದೆ. ಇನ್ನೊಂದೆಡೆ ಅದಕ್ಕೆ ಕೌಂಟರ್ ಕೊಡಲೂ ಕಾಂಗ್ರೆಸ್ ರಣ ನೀತಿ ರೂಪಿಸುತ್ತಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಬಿಜೆಪಿ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಗೆ ನಾವು ಪರವಾನಗಿ ಕೊಡುವುದಿಲ್ಲ. ಆದರೆ, ನಾವು ಅದಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರು ಪಾದಯಾತ್ರೆ ಮಾಡುವುದಿದ್ದರೆ ಮಾಡಿಕೊಳ್ಳಲಿ. ಅದರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಅಧಿಕೃತವಾಗಿ ಪೊಲೀಸ್ ಇಲಾಖೆಯಿಂದ ನಾವು ಅನುಮತಿ ನೀಡುವುದಿಲ್ಲ ಎಂದು ಹೇಳಿದರು.
ಮೇಕೆದಾಟು ಪಾದಯಾತ್ರೆ ಮಾಡಿದಾಗ ನಮಗೂ ಅನುಮತಿ ಕೊಟ್ಟಿರಲಿಲ್ಲ, ನಾವು ಮಾಡಿದೆವು. ಅವರು ಮಾಡಲಿ ತಡೆ ಹಾಕುವುದಿಲ್ಲ. ಅವರಿಗೆ ತೊಂದರೆ ಆಗದಂತೆ ಪಾದಯಾತ್ರೆಗೆ ಬಿಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ರಣನೀತಿ ಮಾಡುತ್ತಿದ್ದಾರೆ. ನಾವೂ ಕೌಂಟರ್ ಮಾಡಲೇಬೇಕಲ್ಲವೆ? ಅವರು ರಾಜಕೀಯ ಮಾಡುತ್ತಾರೆ, ನಾವು ರಾಜಕೀಯ ಮಾಡಬೇಕಾಗುತ್ತದೆ. ನಾವು ಸರ್ಕಾರ ಉಪಯೋಗಿಸಿಕೊಂಡು ರಾಜಕೀಯ ಮಾಡುವುದಿಲ್ಲ. ಪಕ್ಷ ಬಳಸಿ ರಾಜಕೀಯ ಮಾಡುತ್ತೇವೆ ಎಂದರು.
ಮುಡಾದಲ್ಲಿ ಕಾನೂನು ಬಾಹಿರ ಕೆಲಸ ನಡೆದಿಲ್ಲ. ಅದಕ್ಕೆ ಆಯೋಗ ಮಾಡಿದ್ದೇವೆ. ಆಯೋಗ ಮಾಡಿದ ಮೇಲೂ ವಿರೋಧ ಮಾಡುವುದು ಎಷ್ಟು ಸರಿ ಎಂದು ಡಾ.ಪರಮೇಶ್ವರ ಪ್ರಶ್ನಿಸಿದರು.