

ಬೆಂಗಳೂರು: ಮಂಡ್ಯ ಜಿಲ್ಲೆಯ ಗಲಭೆಗ್ರಸ್ತ ಮದ್ದೂರಿಗೆ ರಾಜ್ಯ ಬಿಜೆಪಿ ನಿಯೋಗ ಸೆ.10ರಂದು ಭೇಟಿ ನೀಡಿ, ವಸ್ತುಸ್ಥಿತಿ ಪರಿಶೀಲಿಸಿ ನೊಂದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಈ ನಿಯೋಗದಲ್ಲಿ ನಾನು, ನಮ್ಮ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಪಕ್ಷದ ಮುಖಂಡರು ಈ ನಿಯೋಗದಲ್ಲಿ ಇರುವರು ಎಂದು ಪ್ರವಾಸದ ಕುರಿತು ಮಾಹಿತಿ ನೀಡಿದ್ದಾರೆ.
ಮದ್ದೂರಿನ ಗಲಭೆಕೋರರನ್ನು ಕೂಡಲೇ ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿವೆ. ಹೆಣ್ಮಕ್ಕಳ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ಅವರನ್ನು ಮತ್ತು ಕುಟುಂಬಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಲಿದ್ದೇವೆ ಎಂದರು.
ಮದ್ದೂರಿಗೆ ತೆರಳಿ ಹಿಂದೂ ಸಮಾಜಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಸಿಎಂ, ಡಿಸಿಎಂ, ಗೃಹ ಸಚಿವರ ಹೇಳಿಕೆಗಳನ್ನು ಗಮನಿಸಿದರೆ ಮೈ ಉರಿಯುತ್ತದೆ. ಓಲೈಕೆ ನೀತಿ ಅನುಸರಿಸಿ ಹಿಂದುಗಳನ್ನು ನಿರಂತರವಾಗಿ ಅಪಮಾನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮಂಡ್ಯ ಜಿಲ್ಲೆ ಜನರ ನೆಮ್ಮದಿಗೆ ಬಿಜೆಪಿ, ಜೆಡಿಎಸ್ ಭಂಗ ತಂದಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಈದ್ ಮಿಲಾದ್ ಹಬ್ಬದ ವೇಳೆ ಯಾವುದೇ ಗಲಾಟೆಗಳಾಗಲಿಲ್ಲವೇಕೆ ? ಕರ್ನಾಟಕದ ಜನರು ಶಾಂತಿ, ಸೌಹಾರ್ದ, ಸಹಬಾಳ್ವೆ ಪ್ರಿಯರು ಎಂಬುದನ್ನು ಸಿಎಂ ಅರಿತುಕೊಳ್ಳಬೇಕು ಎಂದು ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದರು.