

ಬೆಂಗಳೂರು: ಪಬ್‌ವೊಂದರಲ್ಲಿ ಮದ್ಯದ ಅಮಲಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಗಲಾಟೆ ಮಾಡಿಕೊಂಡಿದ್ದು, ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕಾರ್ತಿಕ್ ರೆಡ್ಡಿ ಅವರು ನೀಡಿದ ದೂರಿನನ್ವಯ ಸುಧೀಂದ್ರ ರೆಡ್ಡಿ, ಮಧು, ರಾಜೇಶ್ ಎಂಬುವರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಕಾರ್ತಿಕ್ ರೆಡ್ಡಿ ಹಾಗೂ ಬಿಜೆಪಿ ಮುಖಂಡ ಶ್ರೀಧರ್ ರೆಡ್ಡಿ ಅವರ ನಡುವೆ ಗಲಾಟೆ ನಡೆದಿದೆ. ಕಾರ್ತಿಕ್ ರೆಡ್ಡಿ ಅವರ ಮೇಲೆ ಶ್ರೀಧರ್ ರೆಡ್ಡಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಕಾರ್ತಿಕ್ ರೆಡ್ಡಿ ಅವರು ತನ್ನ ಸ್ನೇಹಿತ ಜಿಮ್ ಸೋಮನ ಜತೆಗೆ ನಗರದ ಪಬ್‌ವೊಂದರಲ್ಲಿ ಪಾರ್ಟಿ ಮುಗಿಸಿಕೊಂಡು ವೈಟ್‌ಫೀಲ್ಡ್‌ನತ್ತ ತೆರಳುತ್ತಿದ್ದರು. ಅಷ್ಟರಲ್ಲಿ ಕರೆ ಮಾಡಿದ್ದ ಆರೋಪಿ ರಾಜೇಶ್, ಹೂಡಿಯಲ್ಲಿರುವ ಪಬ್‌ಗೆ ಬರುವಂತೆ ಹೇಳಿದ್ದ. ಇಬ್ಬರೂ ಅಲ್ಲಿಗೆ ತೆರಳಿದ್ದರು.
ಪಬ್‌ನಲ್ಲಿದ್ದಾಗ ಶ್ರೀಧರ್ ರೆಡ್ಡಿ ಅವರು ರಾಜಕಾರಣ ಹಾಗೂ ಪಕ್ಷದ ವಿಚಾರವಾಗಿ ಮಾತನಾಡಲು ಆರಂಭಿಸಿದರು. ಅದಕ್ಕೆ ಆಕ್ಷೇಪಿಸಿ, ಪಕ್ಷದ ಬಗ್ಗೆ ಮಾತನಾಡುವುದಾದರೆ ಸ್ಥಳದಿಂದ ನಾನು ಹೋಗುವುದಾಗಿ ತಿಳಿಸಿದೆ. ಪಬ್‌ನಿಂದ ಹೊರಗಡೆ ಬಂದಾಗ ಬೆದರಿಕೆ ಹಾಕಿದರು. ನೀನು ಕಾರ್ಪೊರೇಟ್ ಚುನಾವಣೆಗೆ ನಿಲ್ಲುತ್ತೀಯಾ. ನೀನು ನಿಂತರೆ ನಾನು ಒಂದು ನಾಯಿ ನಿಲ್ಲಿಸಿ ಚುನಾವಣೆ ಗೆಲ್ಲಿಸುತ್ತೇನೆ ಎಂದು ಶ್ರೀಧರ್ ಬೆದರಿಕೆ ಹಾಕಿದ್ದರು. ಅಲ್ಲದೇ ನನ್ನ ಚಾಲಕನಿಗೆ ಜಾತಿ ನಿಂದನೆ ಮಾಡಿ, ಪಿಸ್ತೂಲ್‌ನಿಂದ ಶೂಟ್ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗಿದೆ ಎಂದು ಕಾರ್ತಿಕ್ ರೆಡ್ಡಿ ಅವರು ಕಾರ್ತಿಕ್ ರೆಡ್ಡಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.