ಜನ ಸೇರಿಸುವುದನ್ನು ಬಿಜೆಪಿಯವರು ಹೇಳಿಕೊಡಬೇಕಿಲ್ಲ ಎಂದು ಡಿಕೆಶಿ ಹೇಳಿದ್ದೇಕೆ?

Dk Shivakumar
Published on

ಬೆಂಗಳೂರು: ಗೃಹಲಕ್ಷ್ಮೀ ಯೋಜನೆಗೆ ಜನ ಸೇರಿಸಲು ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗಿದೆ ಎಂಬ ಬಗ್ಗೆ ಪ್ರತಿಪಕ್ಷಕಡೆಯಿಂದ ಟೀಕೆ ಬರುತ್ತಿರುವ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಸರ್ಕಾರಿ ಕಾರ್ಯಕ್ರಮ. ಇಲ್ಲಿ ಜನರನ್ನು ಯಾರು ಸೇರಿಸಬೇಕಿಲ್ಲ. ನಾವು ಕೇವಲ ಆಮಂತ್ರಣ ನೀಡುತ್ತೇವೆ. ಇದು ಪಕ್ಷದ ಕಾರ್ಯಕ್ರಮವಲ್ಲ. ಪಕ್ಷಬೇಧ ಮರೆತು ಕಾರ್ಯಕ್ರಮ ಮಾಡಬೇಕು ಎಂದರು.

ಬಿಜೆಪಿ ಹಾಗೂ ದಳದ ಶಾಸಕರುಗಳು ಅವರ ಅಧ್ಯಕ್ಷತೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದ್ದೇವೆ. ಕಾಂಗ್ರೆಸ್ ಪರವಾಗಿ ಜನ ಸೇರಿಸುವುದನ್ನು ಬಿಜೆಪಿಯವರು ನಮಗೆ ಹೇಳಿಕೊಡಬೇಕಿಲ್ಲ. ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ? ಅವರಂತೆ ಶಾಲೆ ಕಾಲೇಜುಗಳಿಗೆ ಪತ್ರ ಬರೆದು ಮಕ್ಕಳನ್ನು ಕರೆ ತನ್ನಿ ಎಂದು ಹೇಳುತ್ತಿಲ್ಲ. ನಾವು ಕಾರ್ಯಕ್ರಮಕ್ಕೆ ಆಗಮಿಸುವಂತೆ ಈ ಯೋಜನೆ ಫಲಾನುಭವಿಗಳಿಗೆ ಆಮಂತ್ರಣ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಚುನಾವಣೆ ಸಮಯದಲ್ಲಿ ನಾನು ಹಾಗೂ ಸಿದ್ದರಾಮಯ್ಯ ನಾಡದೇವತೆ ತಾಯಿ ಚಾಂಮುಂಡೇಶ್ವರಿ ಸನ್ನಿಧಾನಕ್ಕೆ ಹೋಗಿ, ಗ್ಯಾರಂಟಿ ಕಾರ್ಡ್ ಗೆ ಸಹಿ ಹಾಕಿ ಈ ಯೋಜನೆ ಜಾರಿ ಮಾಡುವ ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿದ್ದೆವು. ಹೀಗಾಗಿ ಈ ಯೋಜನೆಯನ್ನು ತಾಯಿಯ ಆಶೀರ್ವಾದದ ಮೂಲಕ ಜಾರಿ ಮಾಡಲು ಈ ಕಾರ್ಯಕ್ರಮ ಮೈಸೂರಲ್ಲಿ ಮಾಡುತ್ತಿದ್ದೇವೆ. ಎಐಸಿಸಿ ಎಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಏವರು ಸೇರಿದಂತೆ ಎಐಸಿಸಿ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net