

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷವು(AAP) 2016 ರಿಂದ 2023ರ ನಡುವೆ 24 ದೇವಾಲಯಗಳನ್ನು ಧ್ವಂಸ ಮಾಡಿದೆ ಎಂದು ಭಾರತೀಯ ಜನತಾ ಪಕ್ಷದ(ಬಿಜೆಪಿ) ಶುಕ್ರವಾರ(ಜನವರಿ 3) ಆರೋಪಿಸಿದೆ.
ದೆಹಲಿಯಲ್ಲಿ ತಮ್ಮ ಆಳ್ವಿಕೆಯಲ್ಲಿ 24 ದೇವಾಲಯಗಳನ್ನು ಕೆಡವಲು ಎಎಪಿ ನಾಯಕರು ಆದೇಶ ಹೊರಡಿಸಿದ್ದಾರೆ ಎಂಬುದು ದಾಖಲೆಯಲ್ಲಿ ಸ್ಪಷ್ಟವಾಗಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ 10 ವರ್ಷಗಳಿಂದ ದೆಹಲಿಯನ್ನು ಆಳುತ್ತಿದೆ. ದೇವಾಲಯಗಳನ್ನು ಕೆಡವಲು ಕೇಜ್ರಿವಾಲ್ 'ಫತ್ವಾ'ಗಳನ್ನು ಹೊರಡಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಹೇಳಿದ್ದಾರೆ.
ಸಾರ್ವಜನಿಕ ವಲಯಕ್ಕೆ ಬಂದಿರುವ ದಾಖಲೆಗಳು ಆಮ್ ಆದ್ಮಿ ಪಕ್ಷಕ್ಕಿಂತ ಈ ದೇಶ ಮತ್ತು ಜಗತ್ತಿನಲ್ಲಿ ಯಾವುದೇ ಮೋಸಗಾರ ಪಕ್ಷವಿಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ. 2023ರ ವೇಳೆಗೆ ಎಎಪಿ ಮುಖ್ಯಮಂತ್ರಿ ಮತ್ತು ಸಚಿವರು ಸುಮಾರು 24 ದೇವಾಲಯಗಳನ್ನು ಕೆಡವಲು ಫತ್ವಾಗಳನ್ನು ಹೇಗೆ ಹೊರಡಿಸಿದರು ಎಂಬುದನ್ನು ಸಹಿ ಹೊಂದಿರುವ ದಾಖಲೆಗಳು ತೋರಿಸುತ್ತವೆ ಎಂದು ತಿಳಿಸಿದರು.
2016ರಲ್ಲಿ ಅಂದಿನ ಗೃಹ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅವರ ಸಹಿಯೊಂದಿಗೆ 8 ದೇವಸ್ಥಾನಗಳನ್ನು ಕೆಡವಲು ಫತ್ವಾ ಹೊರಡಿಸಲಾಗಿತ್ತು. ಕುತೂಹಲಕಾರಿ ಸಂಗತಿಯೆಂದರೆ ಸತ್ಯೇಂದ್ರ ಜೈನ್ ಅವರು ಐತಿಹಾಸಿಕ ಹಿನ್ನೆಲೆ ಇಲ್ಲದ ಎರಡು ಅಪರಿಚಿತ ಮಸೀದಿಗಳನ್ನು ಉಳಿಸಲು ಮಧ್ಯಪ್ರವೇಶಿಸಿದ್ದರು ಎಂದು ಹೇಳಿದರು.
ಎಎಪಿ ಭಾರತದ ಅತಿದೊಡ್ಡ ಹಿಂದೂ ವಿರೋಧಿ ಪಕ್ಷವಾಗಿದೆ. ಅವರು ಮತ್ತು ಅವರ ಮೈತ್ರಿಕೂಟದ ಪಾಲುದಾರರಾದ ಡಿಎಂಕೆ, ಟಿಎಂಸಿ, ಎಡ ಮತ್ತು ಕಾಂಗ್ರೆಸ್ ಯಾವಾಗಲೂ ಸನಾತನ ಧರ್ಮದ ವಿರುದ್ಧ ಮಾತನಾಡುತ್ತಾರೆ. ಆದರೆ ಎಎಪಿ ಅದಕ್ಕೆ ಪ್ರತಿಕ್ರಿಯೆಯಾಗಿ ಏನನ್ನೂ ಹೇಳುವುದಿಲ್ಲ ಎಂದರು.
ಜನವರಿ 1 ರಂದು ದೆಹಲಿ ಮುಖ್ಯಮಂತ್ರಿ ಅತಿಶಿ, ರಾಷ್ಟ್ರ ರಾಜಧಾನಿಯಲ್ಲಿ ಹಲವಾರು ದೇವಾಲಯಗಳನ್ನು ಕೆಡವಲು ಬಿಜೆಪಿ ಆದೇಶ ನೀಡಿದೆ ಎಂದು ಆರೋಪಿಸಿದರು. ನವೆಂಬರ್ 22 ರಂದು ನಡೆದ ಧಾರ್ಮಿಕ ಸಮಿತಿಯ ಸಭೆಯಲ್ಲಿ ಪಶ್ಚಿಮ ಪಟೇಲ್ ನಗರ, ದಿಲ್ಶಾದ್ ಗಾರ್ಡನ್, ಸೀಮಾಪುರಿ, ಗೋಕಲ್ಪುರಿ, ನ್ಯೂ ಉಸ್ಮಾನ್ಪುರ ಮತ್ತು ಸುಲ್ತಾನ್ಪುರಿಯಲ್ಲಿರುವ ಹಲವಾರು ದೇವಾಲಯಗಳು ಮತ್ತು ಸುಂದರ್ ನಗರಿಯಲ್ಲಿರುವ ಬೌದ್ಧ ದೇವಾಲಯವನ್ನು ಕೆಡವಲು ನಿರ್ಧರಿಸಲಾಯಿತು ಎಂದು ಅವರು ಹೇಳಿದ್ದಾರೆ. ಇಂತಹ ಆದೇಶಗಳ ಮೂಲಕ ಬಿಜೆಪಿಯ ದ್ವಂದ್ವ ಮುಖ ಬಯಲಾಗಿದೆ. ಒಂದೆಡೆ ಹಿಂದೂ ಧರ್ಮದ ರಕ್ಷಣೆಯ ನೆಪ ಹೇಳಿದರೆ, ಮತ್ತೊಂದೆಡೆ ದೇವಸ್ಥಾನಗಳನ್ನು ಕೆಡವಲು ತಮಗೆ ನೇಮಿಸಿದ ಅಧಿಕಾರಿಗಳು ಹಾಗೂ ಎಲ್ಜಿಗೆ ರಹಸ್ಯವಾಗಿ ಸೂಚನೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದರು.(ಏಜೆನ್ಸೀಸ್)