ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್

BJP chargesheet
Published on

ಬೆಂಗಳೂರು: ಚುನಾವಣೆ ಕಾಲಕ್ಕೆ ಭ್ರಷ್ಟಾಚಾರ ಮುಕ್ತ, ದಕ್ಷ, ಅಭಿವೃದ್ಧಿ ಪರ ಆಡಳಿತ ನೀಡುವ ದೊಡ್ಡ ದೊಡ್ಡ ಮಾತುಗಳನ್ನಾಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಜನರ ಭರವಸೆ, ನಂಬಿಕೆಗಳಿಗೆ ದ್ರೋಹಬಗೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಾಗ್ದಾಳಿ ನಡೆಸಿದರು.

ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ‘ಕೈಕೊಟ್ಟ ಯೋಜನೆಗಳು, ಹಳಿತಪ್ಪಿದ ಆಡಳಿತ’ ಶೀರ್ಷಿಯಡಿ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್‌ನ ಕಿರು ಹೊತ್ತಗೆಯನ್ನು ಬಿಡುಗಡೆ ಮಾಡಿ, ಐದು ಗ್ಯಾರಂಟಿಗಳ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಮೊದಲ ತಪ್ಪು ಮಾಡಿತು.

ಗ್ಯಾರಂಟಿ ಕಾರ್ಡ್‌ಗಳಲ್ಲಿ ಯಾವುದೇ ಷರತ್ತು ಉಲ್ಲೇಖಿಸಿದ್ದಿಲ್ಲ. ಅಧಿಕಾರಕ್ಕೆ ಬಂದ ನಂತರ ಷರತ್ತು ವಿಧಿಸಿದರು. ಸಿದ್ಧತೆ ಹೆಸರಿನಲ್ಲಿ ಮೂರು ತಿಂಗಳು ಕಳೆದಿದ್ದು, ಐದರ ಪೈಕಿ ಇನ್ನೊಂದು ಗ್ಯಾರಂಟಿ ‘ಯುವನಿಧಿ’ ಯುವಜನರ ಕೈಗೆಟುಕುವುದೇ ಅನುಮಾನವೆಂದರು.

ಜೈನ ಮುನಿ, ಹಿಂದು ಸಂಘಟನೆ ಕಾರ್ಯಕರ್ತನ ಹತ್ಯೆಗಳಾದವು. ವರ್ಗಾವಣೆ ದಂಧೆ ಎಗ್ಗಿಲ್ಲದೆ ಮುಂದುವರಿದಿದೆ. ಭ್ರಷ್ಟಾಚಾರದ ಆರೋಪ ಹೊತ್ತ ಸಚಿವರಿಬ್ಬರ ರಾಜೀನಾಮೆ ಪಡೆಯಲಿಲ್ಲ. ಈ ನಿಲುವಿನ ಕಾಂಗ್ರೆಸ್ ತನ್ನ ಬಣ್ಣ ಬಯಲುಗೊಳಿಸಿದೆ ಎಂದು ಟೀಕಿಸಿದರು. ಪಂಚಾಯಿತಿಯಿಂದ ಮುಖ್ಯಮಂತ್ರಿ ಕಚೇರಿವರೆಗೆ ಭ್ರಷ್ಟಾಚಾರ ವ್ಯಾಪಿಸಿದೆ. ಸಿಎಂ ಕಚೇರಿಯನ್ನು ಎರಡು ‘ಶಕ್ತಿ’ಗಳು ನಿಯಂತ್ರಿಸುತ್ತಿವೆ ಎಂಬ ಆರೋಪವಿದೆ.

ನೂರಾರು ತಪ್ಪುಗಳು

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವ ಸಂಭಾವನೆ ಹೆಚ್ಚಳ ಭರವಸೆ ಈವರೆಗೂ ಜಾರಿಗೆ ತಂದಿಲ್ಲ. ರೈತರ ಬದುಕು-ಬವಣೆ ನಿರ್ಲಕ್ಷ್ಯ,ಅೋಷಿತ ವಿದ್ಯುತ್ ಕಡಿತ, ಅಭಿವೃದ್ಧಿ ಸ್ಥಗಿತ, ಜನರ ವಿರೋಧಿ ಆಡಳಿತ ನಡೆಸುತ್ತಿದೆ.

ನೂರು ದಿನಗಳಲ್ಲಿ ನೂರಾರು ತಪ್ಪು ಮಾಡಿದೆ. ಪಕ್ಷದ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಬಂಧಿಸಲಾಗುತ್ತಿದೆ. ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯರಾಗಿರುವವರಿಗೆ ಬೆದರಿಕೆ, ಮಾಧ್ಯಮಗಳಿಗೆ ಹೆದರಿಕೆ ಹುಟ್ಟಿಸಿ, ಅೋಷಿತ ತುರ್ತು ಪರಿಸ್ಥಿತಿ ಹೇರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಿಡಿಕಾರಿದರು.

ಚಾರ್ಜ್‌ಶೀಟ್‌ ಮುಖ್ಯಾಂಶ

- ಕಿಸಾನ್ ಸಮ್ಮಾನ್, ಭೂಸಿರಿ, ವಿದ್ಯಾನಿಧಿ ಸೇರಿ ಬಿಜೆಪಿ ಆಡಳಿತಾವಧಿಯ 17 ಯೋಜನೆಗಳು ರದ್ದು

- ಹೆಚ್ಚಿದ ರೈತರ ಆತ್ಮಹತ್ಯೆ, ಕಲುಷಿತ ಕುಡಿಯುವ ನೀರಿನಿಂದ ಪ್ರಾಣಹಾನಿ

- ವರ್ಗಾವಣೆ ದಂಧೆ, ಪೊಲೀಸ್ ಠಾಣೆಗಳೇ ಹಪ್ತಾ ವಸೂಲಿ ಕೇಂದ್ರ, ಶ್ಯಾಡೋ ಆಡಳಿತ

- ಬರಗಾಲ, ವಿದ್ಯುತ್ ಬೇಡಿಕೆ ನಿರ್ವಹಣೆಯಲ್ಲಿ ವಿಲ. ಅಭಿವೃದ್ಧಿ ಯೋಜನೆಗಳು ಸ್ಥಗಿತ

- ರಾಷ್ಟ್ರೀಯ ವೈಷಮ್ಯದ ಕಾರಣದಿಂದ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಕೈಬಿಡಲು ನಿರ್ಧಾರ

- ಸೈದ್ಧಾಂತಿಕ ದ್ವೇಷ, ಲೇಖಕರ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿ ಪಠ್ಯಪುಸ್ತಕಗಳ ಪರಿಷ್ಕರಣೆ

- ‘ಯುವನಿಧಿ’ ಯುವಪೀಳಿಗೆಗೆ ಮರೀಚಿಕೆ, ಬಿಸಿಯೂಟ, ಅಂಗನವಾಡಿ ನಿರ್ವಹಣೆ ಅಸಮರ್ಪಕ

- ಸ್ವಪಕ್ಷದ ಶಾಸಕರಿಂದಲೇ ಸಚಿವರ ಕಾರ್ಯವೈಖರಿಗೆ ಟೀಕೆ, ಗುತ್ತಿಗೆದಾರರ ನೇರ ಆರೋಪ

- ಶೋಷಿತ ಸಮುದಾಯಗಳಿಗೆ ಮೀಸಲಿಟ್ಟ ಹಣ ಅನ್ಯ ಉದ್ದೇಶಕ್ಕೆ ಬಳಕೆ, ಹಿಂದುಳಿದವರಿಗೆ ಸೂಕ್ತ ಅನುದಾನ ಹಂಚಿಕೆಯಿಲ್ಲ

- ಒಕ್ಕಲಿಗರು, ಲಿಂಗಾಯತರಿಗೆ ನೀಡಿದ್ದ ಮೀಸಲು ನಿರ್ಧಾರ ವಾಪಸ್, ಅಲ್ಪಸಂಖ್ಯಾತರ ಓಲೈಕೆ

- ದೂರು ನೀಡಿದವರ ಮೇಲೆಯೇ ಕೇಸ್, ವಿಚಾರಣೆ, ಬೆದರಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net